ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು, ಸೂಕ್ತ ಸಮಯದಲ್ಲಿ ಅವರ ವಿರುದ್ಧ ಪಕ್ಷ ಕ್ರಮ ಜರುಗಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ B Y Vijayendra ಹೇಳಿದ್ದಾರೆ.
ಸಿಎಂ ಸ್ಥಾನಕ್ಕೆ 2500 ಕೋಟಿ ರೂ. ನೀಡುವಂತೆ ಕೇಂದ್ರದ ನಾಯಕರೇ ಹೇಳಿದ್ದರು ಎಂದು ಬಸವನಗೌಡ ಪಾಟೀಲ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯತ್ನಾಳ್ ಅವರಿಗೆ ಈ ರೀತಿ ಒತ್ತಡ ಹಾಕಿದವರು ಯಾರು ಎಂಬುದನ್ನು ಅವರೇ ತಿಳಿಸಬೇಕು. ಅವರ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು, ಬಿಜೆಪಿ ನಾಯಕರು ಸೂಕ್ತ ಸಮಯದಲ್ಲಿ ಯತ್ನಾಳ್ ವಿರುದ್ಧ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಇತ್ತೀಚೆಗೆ ಬಿಜೆಪಿ ಹಲವು ಸಚಿವರ ಮೇಲೆ ಕಮಿಷನ್ ಆರೋಪಗಳು ಕೇಳಿ ಬರುತ್ತಿವೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಚುನಾವಣೆ ಸಮೀಪಿಸುತ್ತಿರುವುದರಿಂದ ವಿಪಕ್ಷಗಳು ಕಮಿಷನ್ ಹಗರಣ ಸೃಷ್ಠಿ ಮಾಡುತ್ತಿವೆ. ಕಮಿಷನ್ ಕುರಿತು ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ. ಈ ರೀತಿ ಇಲ್ಲ ಸಲ್ಲದ ಅಸಂಬದ್ಧ ಹೇಳಿಕೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆ ಮತ್ತು ಆತುರದಲ್ಲಿದ್ದಾರೆ. ಆದ್ದರಿಂದ ಈ ರೀತಿಯ ಹೇಳಿಕೆಗಳು ಸಹಜ ಎಂದರು.
Also read: ಭಾರತದ ಗಡಿ ಪ್ರವೇಶಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಯೋಧರು: 10ಕೆಜಿಗೂ ಹೆಚ್ಚು ಹೆರಾಯಿನ್ ವಶಕ್ಕೆ

ಪಿಎಸ್ಐ ಹಗರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಜರುಗಿಸಲಿದೆ. ಸಂಪುಟ ಸೇರುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ನನಗೆ ಈಗಾಗಲೇ ಪಕ್ಷ ಸೂಕ್ತ ಸ್ಥಾನ ನೀಡಿದ್ದು, ನಾನಾಗಲೀ, ನಮ್ಮ ಕುಟುಂಬವಾಗಲಿ ಸಂಪುಟ ಸೇರ್ಪಡೆಗೆ ಒತ್ತಡ ಹೇರಿಲ್ಲ ಎಂದರು.

ದುಷ್ಟ ಸಂಘಟನೆಗಳಿಂದ ಶಾಂತಿ ಕದಡುವ ಪ್ರಯತ್ನ:
ಕೆಲವು ದುಷ್ಟ ಸಂಘಟನೆಗಳು ಶಿವಮೊಗ್ಗದಲ್ಲಿ ಶಾಂತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿವೆ ಎಂದು ಇತ್ತೀಚೆಗೆ ನಡೆದ ಕೆಲ ಘಟನೆಗಳನ್ನು ಖಂಡಿಸುತ್ತೇನೆ ಹಾಗೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಈಗಿನ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















