Read - 2 minutesಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವೆಲ್ಲರೂ ಜನಪದ ಹಿನ್ನಲೆಯಿಂದ ಬಂದವರು, ಅಂತಹ ಜನಪದದ ಮೂಲ ಸ್ವರೂಪವನ್ನು ಅರ್ಥೈಸಿಕೊಳ್ಳಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಹೇಳಿದರು.
ನಗರದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಮತ್ತು ಕಲೆಯ ನಡುವೆ ಮೂಡಿರುವುದು ಜನಪದ. ಯುನೆಸ್ಕೋ ಸಂಸ್ಥೆ ವಿಶ್ವದಾದ್ಯಂತ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸುವ ಹಿನ್ನಲೆಯಲ್ಲಿ ಈ ದಿನವನ್ನು ಜಾನಪದ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಈ ಮೂಲಕ ಹೊಸತಲೆಮಾರಿಗೆ ಜನಪದವನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ.
ಇಂದು ಜನಪದ ಕಲಾ ಪ್ರಕಾರಗಳನ್ನು ಯಾವುದೇ ಸಮುದಾಯಕ್ಕೆ ಸೀಮಿತವಾಗಿ ಉಳಿದಿಲ್ಲ. ಪ್ರತಿಭೆಯಿರುವ ಯಾವುದೇ ವ್ಯಕ್ತಿ ಕಲೆಯನ್ನ ಕಲಿಯಬಹುದಾದ ಮುಕ್ತ ಅವಕಾಶವಿದೆ. ಪಠ್ಯಗಳಲ್ಲಿ ಜನಪದ ಸಾಹಿತ್ಯ ಅಳವಡಿಸಿರುವುದು ಅಭಿನಂದನಾರ್ಹ. ಕೇವಲ ಪಠ್ಯ ಕಲಿಕೆಗೆ ಸೀಮಿತವಾಗದೇ ಜನಪದದ ಮೂಲ ಸ್ವರೂಪವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಸಾಹಿತ್ಯ ದಿನಪತ್ರಿಕೆಗಳನ್ನು ಓದುವ ಮೂಲಕ ಅರಿವು ವಿಸ್ತರಿಸಿಕೊಳ್ಳುವ ಪರಿಣಿತಿ ಪಡೆಯಿರಿ.
ನಮ್ಮ ಮನೆಯಲ್ಲಿರುವ ಅಜ್ಜ ಅಜ್ಜಿ ನೀಡುವ ಲೌಕಿಕ ಜ್ಞಾನವನ್ನು ಪಡೆಯಿರಿ. ಮೊಬೈಲ್ ಎತ್ತಿಟ್ಟು ಒಂದಿಷ್ಟು ಸಮಯ ಮನೆಯಲ್ಲಿರುವ ಹಿರಿಯರೊಂದಿಗೆ ಬೆರೆಯಿರಿ. ಅವರು ಹೇಳುವ ಮೌಲ್ಯಾಧಾರಿತ ವಿಚಾರಗಳನ್ನು ಅದೇ ಮೊಬೈಲ್ ಮೂಲಕ ಸಂಗ್ರಹಿಸುವ ಪ್ರಯತ್ನ ಮಾಡಿ ಎಂದು ಹೇಳಿದರು.
Also read: ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ಬಿಗ್ ಅಪ್ಡೇಟ್: ಇಲ್ಲಿದೆ ಲೇಟೆಸ್ಟ್ ವೀಡಿಯೋ
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಆಧುನಿಕ ಪ್ರಪಂಚದಲ್ಲಿ ಜನಪದ ಕಣ್ಮರೆಯಾಗುತ್ತಿದೆ ಎಂಬ ಭ್ರಾಂತಿ ಬೇಡ. ಕಾಲೇಜಿನಲ್ಲಿ ಒಂದು ದಿನ ಜನಪದ ಕಲೆಗಳ ಅನಾವರಣ ಮಾಡುವ ಪ್ರಯತ್ನ ಮಾಡಿ. ಇದರಿಂದ ಶಿಸ್ತು ಸೌಜನ್ಯತೆಯೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರಭಾರ ಪ್ರಾಂಶುಪಾಲರಾದ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕರಾದ ಶುಭಕರ್ ಸ್ವಾಗತಿಸಿದರು.
Discussion about this post