ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಶಿವಮೊಗ್ಗ ಇವರ ಸಹಯೋಗದೊಂದಿಗೆ ನವೆಂಬರ್ 12 ಮತ್ತು 13 ರಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವುಲೆ ಶಿವಮೊಗ್ಗ ಇಲ್ಲಿ ಕೃಷಿ ಮೇಳ-2021 ಹಮ್ಮಿಕೊಳ್ಳಲಾಗಿದೆ.
ನವೆಂಬರ್ 12 ರ ಬೆಳಿಗ್ಗೆ 10.30 ಕ್ಕೆ ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಬಿ.ಸಿ.ಪಾಟೀಲ್ ಇವರು ಕೃಷಿ ಮೇಳದ ಉದ್ಘಾಟನೆಯನ್ನು ನೆರವೇರಿಸುವರು.
ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಇವರು ವಸ್ತುಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಗೃಹ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಇವರು ಬೆಳೆ ಪ್ರಾತ್ಯಕ್ಷಿಕೆ ಸಸ್ಯಕಾಶಿ ಉದ್ಘಾಟನೆ ನೆರವೇರಿಸುವರು.
ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂಪ್ಪನವರು ಶ್ರೇಷ್ಟ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪುರಸ್ಕಾರ ವಿತರಿಸುವರು. ಸಂಸದರಾದ ಬಿ.ವೈ.ರಾಘವೇಂದ್ರ ಇವರು ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡುವರು. ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಹಾಗೂ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ವಿಧಾನಸಭಾ ಮತ್ತು ವಿಧಾನಪರಿಷತ್ ಶಾಸಕರು ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರು, ಅಧಿಕಾರಿಗಳು, ಅಬ್ಬಲಗೆರೆ ಗ್ರಾ.ಪಂ ಅಧ್ಯಕ್ಷರು, ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಸರ್ಕಾರದ ಅಪರ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಪಾಲಿಕೆ ಆಯುಕ್ತರು ಪಾಲ್ಗೊಳ್ಳುವರು.
ನವೆಂಬರ್ 13 ರಂದು ಬೆಳಿಗ್ಗೆ 10.30 ಕ್ಕೆ ‘ಕೋವಿಡ್ ನಂತರದ ಕೃಷಿ-ರೈತರ ಆದಾಯ ದ್ವಿಗುಣ ಮತತು ಪೌಷ್ಟಿಕಾಂಶಗಳ ಭದ್ರತೆ’ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ.ಜೆ.ಚಂದ್ರೇಗೌಡ, ಪ್ರಧಾನ ವಿಜ್ಞಾನಿ, ಅಟಾರಿ, ಬೆಂಗಳೂರು, ಡಾ. ರೂಪ.ಟಿ.ಆರ್ ಪ್ರಧಾನ ವಿಜ್ಞಾನಿ ಐಐಹೆಚ್‍ಆರ್, ಬೆಂಗಳೂರು, ಪ್ರಕಾಶ್ ಜಿ.ಆರ್, ಎಸ್‍ಜಿಎಂ ಟೆಕ್ನಾಲಜೀಸ್ ಶಿವಮೊಗ್ಗ, ಡಾ.ಸಿ.ನಾರಾಯಣಸ್ವಾಮಿ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರು, ಇಫ್ಕೋ ಬೆಂಗಳೂರು ಇವರು ಪಾಲ್ಗೊಳ್ಳುವರು.
ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡುವರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post