ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹವಾಮಾನ ವೈಪರೀತ್ಯ ಹಾಗೂ ಬರಗಾಲದ ಸವಾಲುಗಳನ್ನು ಎದುರಿಸಲು ರೈತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ನಾಲ್ಕು ದಿನಗಳ ಕಾಲ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ (Agriculture Horiculture Fair) ಆಯೋಜಿಸಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ತಿಳಿಸಿದರು. ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದಡಿ ಶಿವಮೊಗ್ಗದ (Shivamogga) ಕೃಷಿ ಮಹಾವಿದ್ಯಾಲಯದ ನವಿಲೆ ಆವರಣದಲ್ಲಿ ಮೇಳ ನಡೆಯಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
600ಕ್ಕೂ ಹೆಚ್ಚು ಮಳಿಗೆಗಳು
ಕೃಷಿ ಮೇಳದಲ್ಲಿ ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳು, ಬೀಜ, ರಸಗೊಬ್ಬರ, ಯಂತ್ರೋಪಕರಣಗಳು, ಸಸಿ-ಗಿಡಗಳು ಹಾಗೂ ವಿವಿಧ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಾಗಿ 600ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ.
ಬೀಜ ಮತ್ತು ಸಸಿಗಳ 50 ಮಳಿಗೆ, ಕೀಟನಾಶಕಗಳ 80, ಕೃಷಿ ಸಲಕರಣೆಗಳ 35, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ 40, ಎಫ್ಪಿಒ/ಸ್ವಸಹಾಯ ಸಂಘಗಳ 30, ನರ್ಸರಿಗಳ 15 ಹಾಗೂ 60 ಆಹಾರ ಮಳಿಗೆಗಳು ಸೇರಿದಂತೆ ವಿವಿಧ ವಿಭಾಗಗಳ ಮಳಿಗೆಗಳು ಇರಲಿವೆ.
ಇದರೊಂದಿಗೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR)ನ 15ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಹಾಗೂ ಸುಮಾರು 80 ಸರ್ಕಾರಿ ಇಲಾಖೆಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಮೂರು ದಿನ ತಜ್ಞರೊಂದಿಗೆ ಸಂವಾದ
ಮೇಳದ ಅಂಗವಾಗಿ ಮೂರು ದಿನ ವಿವಿಧ ಕೃಷಿ ವಿಷಯಗಳ ಕುರಿತು ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 30ರಂದು ‘ಬರಕ್ಕೆ ಹೆದರದ ನೈಸರ್ಗಿಕ ಕೃಷಿ: ಜೀವಂತ ಮಣ್ಣಿನ ಜೀವಶಕ್ತಿ’, ಅಕ್ಟೋಬರ್ 31ರಂದು ಅಂತಾರಾಷ್ಟ್ರೀಯ ಮಹಿಳಾ ವರ್ಷದ ಅಂಗವಾಗಿ ‘ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ’ ಹಾಗೂ ನವೆಂಬರ್ 1ರಂದು ‘ಡಿಜಿಟಲ್ ಕೃಷಿ: ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ’ ವಿಷಯಗಳ ಕುರಿತು ವಿಸ್ತೃತ ಚರ್ಚೆ ಮತ್ತು ಸಂವಾದ ನಡೆಯಲಿದೆ.
ರೈತರು ಹಾಗೂ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು ಈ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಕುಲಪತಿ ಮನವಿ ಮಾಡಿದರು.
‘ಕೋಣದ ಕಣೆ’ಯಿಂದ ಮುತ್ತು ಕೃಷಿವರೆಗೆ
ಕೃಷಿ ಮೇಳದಲ್ಲಿ ಬರ ನಿರ್ವಹಣಾ ವಿಭಾಗ, ಅಡಿಕೆ, ಮೀನುಗಾರಿಕೆ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಏಡಿ ಸಾಕಣೆ, ಮುತ್ತು ಕೃಷಿ ಹಾಗೂ ಬ್ಲಾಕ್ ಸೋಲ್ಜರ್ ಫ್ಲೈ ಸೇರಿದಂತೆ ಹಲವು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಪ್ರದರ್ಶನ ಇರಲಿದೆ.
ಮಲೆನಾಡಿನಲ್ಲಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕಬ್ಬಿನ ಗಾಣದ ಅಪರೂಪದ ‘ಕೋಣದ ಕಣೆ’ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿದೆ.
ಇದರ ಜೊತೆಗೆ ಶ್ವಾನ ಪ್ರದರ್ಶನ, ಹಸು-ಎಮ್ಮೆ ಹಾಗೂ ಕುರಿ-ಆಡು ಸ್ಪರ್ಧೆ, ಸಿರಿಧಾನ್ಯ ಪಾಕ ಸ್ಪರ್ಧೆ ಮತ್ತು ಮೀನುಗಾರಿಕೆ ಇಲಾಖೆಯ ‘ಮತ್ಸ್ಯಾಂಗಣ’ ಮೇಳದ ಪ್ರಮುಖ ಆಕರ್ಷಣೆಗಳಾಗಲಿವೆ.
ಹೊಸ ಕೃಷಿ ತಂತ್ರಜ್ಞಾನಗಳ ಅನಾವರಣ
ವಿಶ್ವವಿದ್ಯಾಲಯ ಆವಿಷ್ಕರಿಸಿರುವ ‘ಬಹುಉಪಯೋಗಿ ಕೃಷಿ ಉಪಕರಣ’ ಮತ್ತು ‘ಸೋಲಾರ್ ಮಲ್ಟಿಗ್ರೇನ್ ಕ್ಲೀನರ್’ಗೆ ಪೇಟೆಂಟ್ ದೊರೆತಿದೆ. ‘ಸಹ್ಯಾದ್ರಿ ಸಿಂಧೂರ’ ಕೆಂಪು ಭತ್ತ ಹಾಗೂ ‘ಸಹ್ಯಾದ್ರಿ ಪ್ರಗತಿ’ ಕಡಲೆ ತಳಿಗಳಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ ಎಂದು ಡಾ. ಧನಂಜಯ ಮಾಹಿತಿ ನೀಡಿದರು.
ಮೇಳದಲ್ಲಿ ಆಕ್ರೋಮೆಟ್ AI ವಾಟ್ಸಪ್ ಬಾಟ್, ಸಹ್ಯಾದ್ರಿ AI ಸಮಾಲೋಚನಾ ತಂತ್ರಾಂಶ ಹಾಗೂ ಹೊಸ ಭತ್ತದ ತಳಿ ‘ಸಹ್ಯಾದ್ರಿ ಅನ್ನಪೂರ್ಣ’ ಬಿಡುಗಡೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಏಳು ಸಂಸ್ಥೆಗಳೊಂದಿಗೆ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದರು.
Also Read>> ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ | ಈಶ್ವರಪ್ಪ, ಕಾಂತೇಶ್ ಪೊಲೀಸ್ ವಶಕ್ಕೆ
Shivamogga: 12 ಪ್ರಗತಿಪರ ರೈತರಿಗೆ ಪ್ರಶಸ್ತಿ
ಮೇಳದ ಮೊದಲ ದಿನ ಪದ್ಮಶ್ರೀ ಪುರಸ್ಕೃತ ಪ್ರಗತಿಪರ ರೈತ ಸತ್ಯನಾರಾಯಣ ಬೇಲೆರಿ ಅವರು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಕೃಷಿ ಮೇಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಕೃಷಿ ವಸ್ತು ಪ್ರದರ್ಶನ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪುಸ್ತಕ ಹಾಗೂ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಿದ್ದಾರೆ. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸಲಿದ್ದಾರೆ. ಶಾಸಕಿ ಶಾರದಾ ಪೂರ್ಯಾನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಆರು ಜಿಲ್ಲೆಗಳ 12 ಮಂದಿ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಶ್ರೀಧರ್, ಡಾ. ವೀರಣ್ಣ, ಡಾ. ಮಾವರ್ಕರ್, ಡಾ. ಎಸ್.ಯು. ಪಾಟೀಲ್, ಡಾ. ಅವಿನಾಶ್, ಪ್ರಿಯಾಂಕ, ಡಾ. ರಾಘವೇಂದ್ರ ಮೇಸ್ತ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










