ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಎಲ್ಲ ಕಾರ್ಯಕರ್ತರೂ ದೇಶದ ಜನತೆಗೆ ಜನಪರ ಯೋಜನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯ #PM Narendra Modi ರಾಯಭಾರಿಗಳಾಗಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ಅವರು ಇಂದು ನಗರದ ಬಂಜಾರ ಸಮುದಾಯ ಭವನದಲ್ಲಿ ಬಿಜೆಪಿ ಶಿವಮೊಗ್ಗ ವಿಭಾಗವು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್, ಇತರ ಪಕ್ಷಗಳು ಹಾಗೂ ಬಿಜೆಪಿ ನಡುವೆ ವ್ಯತ್ಯಾಸವಿದೆ. ಬಿಜೆಪಿ ಕಾರ್ಯಕರ್ತರಿಗೆ ಉದ್ಧೇಶ ಮತ್ತು ಗುರಿ ಇದೆ. ರಾಷ್ಟ್ರೀಯ ವೈಚಾರಿಕತೆಯ ಬದ್ಧತೆ ಇದೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರು ಧ್ಯೇಯವನ್ನಿಟ್ಟುಕೊಂಡು ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಬೇರೆ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹುರಿದುಂಬಿಸಿದರು.
ದೇಶದಲ್ಲಿ ಕಾಂಗ್ರೆಸ್ 55-60ವರ್ಷಗಳ ಕಾಲ ಆಡಳಿತ ನಡೆಸಿದ್ದು ಕೇವಲ ಅನುಕಂಪದ ಆಧಾರದ ಮೇಲೆ. ಆದರೆ ಮೋದಿ ಅಧಿಕಾರಕ್ಕೆ ಬಂದಿದ್ದು ಪಾಸಿಟಿವ್ ಮ್ಯಾಂಡೇಟ್ ಮೇಲೆ ಎಂದು ಕಾಂಗ್ರಸ್ ನ್ನು ಟೀಕಿಸಿದರು.
ಪ್ರಧಾನಿ ಮೋದಿಯವರು ಕೊಟ್ಟ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಕರ್ತವ್ಯ ಕಾರ್ಯಕರ್ತರದ್ದು. ಪಕ್ಷ ಬಲಪಡಿಸುವ ಕೆಲಸ ಒಂದೆಡೆಯಾದರೆ ಕೇದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಶಾಸಕರದ್ದೇ ಹೇಳಿಕೆ ಗಮನಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 4 ತಿಂಗಳಿಂದ ಪಡಿತರ ಸಾಗಾಣೆ ಲಾರಿ ಮಾಲಿಕರಿಗೆ 260ಕೋಟಿ ರೂ.ಬಾಡಿಗೆ ಕೊಡದೆ ಇದ್ದ ಕಾರಣ ಅವರು ಮುಷ್ಕರಕ್ಕೆ ಇಳಿದಿದ್ದಾರೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಸರ್ಕಾರ ನಾಡಿನ ಜನತೆಗೆ ಶಾಪವಾಗಿ ಪರಿಣಮಿಸಿದೆ ಎಂದು ಟೀಕಾ ಪ್ರಹಾರ ಮಾಡಿದರು.
ಸದ್ಯದ ಪರಿಸ್ಥಿತಿ ನೋಡಿದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದು ಯಕ್ಷ ಪ್ರಶ್ನೆಯಾಗಿದೆ. ರಾಜ್ಯದ ಜನ ಸರ್ಕಾರದ ವಿರುದ್ಧ ದಂಡೆತ್ತಿ ಹೋಗುವ ದಿನ ದೂರವಿಲ್ಲ. ರಾಜ್ಯದ ಭ್ರಷ್ಟ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಶಾಂತಾರಾಮ ಸಿದ್ದಿ, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಪ್ರಮುಖರಾದ ಡಿ.ಎನ್.ದೇವರಾಜ್, ರೂಪಾಲಿ ನಾಯ್ಕ, ಸುನಿಲ್ ನಾಯ್ಕ್, ಶಿವಾನಂದ ನಾಯ್ಕ, ಡಿ.ಎನ್.ದೇವರಾಜ್, ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಎನ್.ಎಸ್.ಹೆಗಡೆ, ಸ್ವಾಮಿರಾವ್,ಸುನೀಲ್ ಹೆಗಡೆ, ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಡಿ.ಎಸ್.ಸುರೇಶ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post