ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಡವರಿಗೆ ಮನೆಗಳನ್ನು ಹಂಚುವುದು ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಅವರು ಇಂದು ನಗರದ ಹೊರವಲಯದಲ್ಲಿರುವ ಗೋವಿಂದಾಪುರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ 3 ಸಾವಿರ ಮನೆಗಳಲ್ಲಿ ಒಂದನೇ ಹಂತವಾಗಿ ಸಂಪೂರ್ಣ ವಂತಿಕೆ ಹಣ ಪಾವತಿಸಿದ ಹಾಗೂ ಬ್ಯಾಂಕಿನಿಂದ ಸಂಪೂರ್ಣ ಸಾಲ ಮಂಜೂರಾತಿಯಾದ ಫಲಾನುಭವಿಗಳಿಗೆ ಹಾಗೂ ಅರ್ಹ 620 ಫಲಾನುಭವಿಗಳಿಗೆ ಲಾಟರಿ ಮೂಲಕ ಗುಂಪು ಮನೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ನನ್ನ ತಾಯಿ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಆತ್ಮಕ್ಕೆ ಈ ವಸತಿ ಹಂಚಿಕೆ ಕಾರ್ಯ ಶಾಂತಿ ತಂದಿರಬಹುದು ಎಂದು ಭಾವಿಸುತ್ತೇನೆ. 7 ವರ್ಷಗಳ ಹಿಂದೆಯೇ ಆಶ್ರಯ ಮನೆ ನೀಡಲು ಎಲ್ಲಾ ಹಂತದ ಯೋಜನೆಗಳನ್ನು ಸಿದ್ದಪಡಿಸಲಾಗಿತ್ತು. ಹಲವಾರು ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ಮಟ್ಟಿನ ವಿಳಂಬವಾಗಿದೆ. ಈಗ 620 ಮನೆಗಳು ಸಿದ್ಧವಾಗಿದ್ದು, ಲಾಟರಿ ಮೂಲಕ ಹಂಚಿಕೆ ಪ್ರಕ್ರಿಯೆ ಇಂದು ನಡೆಸಲಾಗಿದೆ. ಫೆ.8ರಂದು ಮುಖ್ಯಮಂತ್ರಿಗಳು ಎನ್‌ಇಎಸ್ ಮೈದಾನದಲ್ಲಿ ಅಷ್ಟು 620 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಿದ್ದಾರೆ ಎಂದರು.

Also read: ಹೆಚ್.ಡಿ. ಕುಮಾರಸ್ವಾಮಿ ನಾಡಿನ ಬ್ರಾಹ್ಮಣರ ಕ್ಷಮೆ ಕೇಳಲಿ: ಎಸ್. ದತ್ತಾತ್ರಿ ಆಗ್ರಹ
ಬ್ಯಾಂಕ್ ಸಾಲ ಲಭ್ಯಗೊಂಡು ಅವರೊಂದಿಗೆ ಅಗ್ರಿಮೆಂಟ್ ಆದ ತಿಂಗಳಿಂದಲೇ ಮಾಸಿಕ ಕಂತು ಕಟ್ಟಲು ಪ್ರಾರಂಭವಾಗುತ್ತದೆ. ಉಳಿದ ಮನೆಗಳ ನಿರ್ಮಾಣ ಕಾರ್ಯ ಕೂಡ ವೇಗವಾಗಿ ನಡೆಯಲಿದೆ ಎಂದರು.

ಸಾಮಾನ್ಯ ವರ್ಗಕ್ಕೆ 4.27ಲಕ್ಷ, ಎಸ್‌ಸಿ ಮತ್ತು ಎಸ್‌ಟಿ ಗಳಿಗೆ 3.97ಲಕ್ಷ ಸಾಲ ಸೌಲಭ್ಯ ಮಂಜೂರಾಗಿದ್ದು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಅಂತಿಮ ಹಂಚಿಕೆ ಪತ್ರ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಲಾಟರಿ ಪ್ರಕ್ರಿಯೆ ಮೂಲಕ ವಸತಿಯನ್ನು ಹಂಚಿಕೆ ಮಾಡಲಾಯಿತು. ವೇದಿಕೆಯಲ್ಲಿ ಶಾಸಕ ಆಯನೂರು ಮಂಜುನಾಥ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ವಿಪಕ್ಷ ನಾಯಕಿ ರೇಖಾ ರಂಗನಾಥ್, ಈ.ವಿಶ್ವಾಸ್, ಯೋಜನಾಧಿಕಾರಿ ಕರಿಭೀಮಣ್ಣನವರ್, ಆಶ್ರಯ ಸಮಿತಿ ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.










Discussion about this post