ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿ, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ H D Kumaraswamy ನೀಡಿರುವ ಹೇಳಿಕೆಯನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಬ್ರಾಹ್ಮಣ ಸಮುದಾಯ ಅನಾಧಿ ಕಾಲದಿಂದಲೂ ಸರ್ವೆ ಜನಃ ಸುಖಿನೋ ಭವಂತು ಎಂಬ ಯುಕ್ತಿಯಂತೆ ಸದಾಕಾಲ ಸರ್ವರ ಹಿತ ಕಾಪಾಡುವ ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡಿರುವುದು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಶೋಭೆ ತರುವಂತದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೇಶದ ಮೊದಲನೇ ಸ್ವಾತಂತ್ರ್ಯ ಹೋರಾಟದಲ್ಲಿ ಮಂಗಲ್ ಪಾಂಡೆಯವರಂತಹ ಅನೇಕ ಬ್ರಾಹ್ಮಣ ಯುವಕರು ತಮ್ಮ ಬಲಿದಾನ ಮಾಡಿದ್ದಾರೆ. ಕ್ರಾಂತಿಕಾರಿ ಹೋರಾಟದಲ್ಲಂತೂ ಚಂದ್ರಶೇಖರ್ ಅಜಾದ್‌ರಂತೆ ನೂರಾರು ಬ್ರಾಹ್ಮಣ ಯುವಕರು ಬ್ರಿಟೀಷರ ಗುಂಡಿಗೆ, ಇಲ್ಲವೇ ನೇಣುಗಂಬಕ್ಕೆ ಬಲಿಯಾಗಿದ್ದಾರೆ. ಹಾಗೆಯೇ ಹತ್ತಾರು ವರ್ಷ ಜೈಲುಶಿಕ್ಷೆಯನ್ನು ಅನುಭವಿಸಿದ್ದಾರೆ. ಮಹಾತ್ಮಗಾಂಧಿ ನೇತೃತ್ವದ ಅಹಿಂಸಾ ಹೋರಾಟದಲ್ಲಿಯೂ ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್ ಹೀಗೆ ಸಾವಿರಾರೂ ಬ್ರಾಹ್ಮಣರು ತಮ್ಮ ಮನೆ ಬಿಟ್ಟು ಹೋರಾಟದಲ್ಲಿ ಭಾಗಿಯಾಗಿರುವುದು ಸ್ಮರಣೀಯ. ಹೀಗಿರುವಾಗ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಬ್ರಾಹ್ಮಣರ ಇತಿಹಾಸ, ಅದರಲ್ಲಿರುವ ಉಪಪಂಗಡಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೇ ಬಾಯಿಗೆ ಬಂದಂತೆ ಮಾತನಾಡಿ ಸ್ವಚ್ಛ ರಾಜಕಾರಣಿ, ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಪಾತ್ರವಹಿಸಿ, ಅತ್ಯಂತ ಶ್ರದ್ಧೆ, ನಿಷ್ಠೆ, ಪ್ರಾಮಾಣಿತೆಯಿಂದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಪ್ರಹ್ಲಾದ ಜೋಷಿಯವರ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ದೂರಿದ್ದಾರೆ.
ಒಂದುವೇಳೆ ಪ್ರಹ್ಲಾದ ಜೋಷಿಯವರನ್ನು ಈ ರಾಜ್ಯದ ಮುಖ್ಯಮಂತ್ರಿಯೆಂದು ಕೇಂದ್ರ ಬಿಜೆಪಿ ಮುಂದೆ ತಿರ್ಮಾನ ತೆಗೆದುಕೊಂಡರೆ ಅದರಲ್ಲಿ ತಪ್ಪೇನಿದೆ? ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದ ಹಾಗೂ ಪ್ರಸುತ್ತ ಆಡಳಿತ ವ್ಯವಸ್ಥೆಯಲ್ಲಿರುವ ಬ್ರಾಹ್ಮಣರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪಾರದರ್ಶಕದಿಂದ ನಿಷ್ಠೆಯಿಂದ ನಿರ್ವಹಿಸಿರುವುದು ನಮಗೆಲ್ಲ ತಿಳಿದಿರುವ ವಿಷಯ. ಕುಮಾರಸ್ವಾಮಿಯವರು ಕರ್ನಾಟಕದ ಉತ್ತರ ಭಾಗದಲ್ಲಿರುವ ಬ್ರಾಹ್ಮಣರು ಯಾರು? ದಕ್ಷಿಣ ಭಾಗದಲ್ಲಿರುವ ಬ್ರಾಹ್ಮಣರು ಯಾರು? ಎಂದು ಸರಿಯಾಗಿ ತಿಳಿದುಕೊಳ್ಳಲಿ ಎಂದು ದೂರಿದ್ದಾರೆ.
ಬ್ರಾಹ್ಮಣರ ಆರ್ಶಿವಾದ ಪಡೆದು, ತಮ್ಮ ಪಾಪ ಕರ್ಮಗಳಿಂದ ವಿಮುಕ್ತಿ ಪಡೆಯಲು ಸದಾ ಕಾಲ ಶೃಂಗೇರಿಗೆ ಭೇಟಿ ಮಾಡುವ ಕುಮಾರಸ್ವಾಮಿಯವರಿಗೆ, ಬ್ರಾಹ್ಮಣರನ್ನ ಇದ್ದಕಿದ್ದ ಹಾಗೆ ಅಪಮಾನ ಮಾಡುವ ಹಿಂದೆ ಯಾವ ರಾಜಕೀಯ ಷಡ್ಯಂತರ ಇದೆ ಎಂಬುದು ಅರ್ಥವಾಗದ ಸಂಗತಿ. ಹೆಚ್.ಡಿ ಕುಮಾರಸ್ವಾಮಿ ಯವರು ತಮ್ಮ ಬೇಜವಾಬ್ದಾರಿ ಹೇಳಿಕೆಯನ್ನು ವಾಪಸ್ಸು ಪಡೆದು ಈ ನಾಡಿನ ಬ್ರಾಹ್ಮಣರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post