ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಷಟಲ್ ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್‌ಗಾಗಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ `ರಾವ್ ಸ್ಪೋರ್ಟ್ಸ್ ಅರೆನಾ’ ಗುಂಡಪ್ಪ ಶೆಡ್‌ನಲ್ಲಿರುವ ರಾಮರಾವ್ ಲೇಔಟ್‌ನಲ್ಲಿ ಆರಂಭಗೊಂಡಿದೆ ಎಂದು ಅರೇನಾ ಸಂಸ್ಥೆಯ ಮುಖ್ಯಸ್ಥ ಆರ್ ಆದಿತ್ಯ ಹೇಳಿದರು.
ಅವರು ಇಂದು ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ಸುಂದರವಾದ ಪರಿಸರದಲ್ಲಿರುವ ಈ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್‌ಗಾಗಿ ಐದು ಕೋರ್ಟ್ ಹಾಗೂ ಕ್ರಿಕೆಟ್‌ಗಾಗಿ ಮೂರು ಪಿಚ್‌ಗಳನ್ನು ನಿರ್ಮಿಸಲಾಗಿದೆ. ಇಂಡೋರ್ ಕ್ರಿಕೆಟ್ ಪಿಚ್ ಶಿವಮೊಗ್ಗದಲ್ಲೇ ಇದು ಮೊದಲನೆಯದ್ದಾಗಿದೆ ಎಂದರು.
ಈ ಕ್ರೀಡಾಂಗಣ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ತೆರೆದಿರುತ್ತದೆ. ಬ್ಯಾಡ್ಮಿಂಟನ್‌ನ ಐದು ಕೋರ್ಟ್‌ಗಳಲ್ಲಿ ನಿತ್ಯವೂ ತರಬೇತಿ ನಡೆಯಲಿದೆ, ಅಲ್ಲದೆ, ನಿತ್ಯವೂ ಕ್ರೀಡಾಪಟುಗಳು ಬಂದು ಅಭ್ಯಾಸ ನಡೆಸಲು ಅವಕಾಶವಿದೆ.
ಕರ್ನಾಟಕ ರಾಜ್ಯ ಷಟಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿರುವ ಆರ್. ಅರುಣ್ ಮಲೆನಾಡಿನ ಹೆಮ್ಮೆಯ ಕ್ರೀಡಾಪಟು. ಶಿವಮೊಗ್ಗ ಜಿಲ್ಲಾ ಷಟಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಕಾರ್ಯದರ್ಶಿಯಾಗಿಯೂ ಸೇವೆ ಸಲಿಸುತ್ತಿದ್ದಾರೆ ಎಂದರು.
Also read: ಗ್ರಾಹಕರ ಅನುಕೂಲಕ್ಕಾಗಿ ಟಿಟಿಕೆ ಪ್ರೆಸ್ಟೀಜ್ ವಿಶೇಷ ಮಳಿಗೆ ಆರಂಭ: ಸಂಸದ ರಾಘವೇಂದ್ರ
ಈ ಕ್ರೀಡಾಂಗಣದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಂದ್ಯಗಳನ್ನು ನಡೆಸಲು ಅವಕಾಶವಿದೆ. ಜೊತೆಗೆ ಬೇರೆ ಬೇರೆ ಕ್ಲಬ್ ಗಳೂ ಇಲ್ಲಿ ತರಬೇತಿ ನೀಡಲು ಅವಕಾಶವಿದೆ. ವೈಯಕ್ತಿಕವಾಗಿ ತರಬೇತಿ ಪಡೆಯಲೂ ಅವಕಾಶವಿದೆ. ವರ್ಷವಿಡೀ ಬೇರೆಬೇರೆ ವಯೋಮಾನದವರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಶಿವಮೊಗ್ಗದಲ್ಲಿ ಸರಿಸುಮಾರು 4-5 ತಿಂಗಳು ಮಳೆ ಬರುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಅಭ್ಯಸವೇ ನಿಂತು ಹೋಗುತ್ತದೆ. ಆದರೆ, ರಾವ್ ಸ್ಪೋರ್ಟ್ ಅರೆನಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ತರಬೇತಿ- ಅಭ್ಯಾಸ ಪಡೆಯಬಹುದಾಗಿದೆ ಎಂದರು.
12500 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣ 37 ಅಡಿ ಎತ್ತರವಿದೆ. ಸಿಲಿಕಾನ್ ತಂತ್ರಜ್ಞಾನ ಜರ್ಮನ್ ಇಂಜಿನಿಯರ್ಸ್ ಹೈಬ್ರಿಡ್ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಕ್ರಿಕೆಟ್ ಆಸ್ಟ್ರೋ ಟರ್ಫ್ ಪಿಚ್ ಇದೆ. ಈ ಕ್ರೀಡಾಂಗಣದಲ್ಲಿ ಅಳವಡಿಸಿರುವ ವಿಶೇಷ ಎಲ್‌ಇಡಿ ಲೈಟ್‌ಗಳಿಗೆ 350 ಲಕ್ಸ್ ಮಟ್ಟವಿದೆ. ಈ ಬೆಳಕಿನಲ್ಲಿ ಶಟಲ್‌ಗಳು ಗಂಟೆಗೆ 400 ಕಿಮೀ ವೇಗದಲ್ಲಿ ಸಾಗುವಾಗಲೂ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದರು.
ಮಲೆನಾಡಿನೆ ಹೆಮ್ಮೆಯ ಈ ರಾವ್ ಸ್ಪೋರ್ಟ್ಸ್ ಅರೆನಾ ಫೆ. 12ರ ಭಾನುವಾರ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಪಟುಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಎಸ್. ನಾಗರಾಜ್, ಆರ್. ಅರುಣ್, ಆರ್. ಅಜೇಯ್, ಹಾಲಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post