ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರಿಂದ ಅಡಿಕೆ (Arecanut) ಖರೀದಿಸಿ, ಸಂಸ್ಕರಣೆ ನಡೆಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ರವಾನಿಸುತ್ತಿರುವ ನಗರದ ಹೊರವಲಯದ ಬುಳ್ಳಾಪುರದಲ್ಲಿರುವ ಅಡಿಕೆ ಸಂಸ್ಕರಣಾ ಘಟಕಕ್ಕೆ (Shivamogga) ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಡಿಕೆ ಗೋಡನ್‌ಗಳಲ್ಲಿ ಅಡಿಕೆಗೆ ಹೆಚ್ಚು ಕೆಂಪು ಹಾಗೂ ಆಕರ್ಷಕ ಬಣ್ಣ ಬರಲೆಂದು ನಿಷೇಧಿತ ಮತ್ತು ಕಾನೂನುಬಾಹಿರ ರಾಸಾಯನಿಕಯುಕ್ತ ಕೈಗಾರಿಕಾ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಅಡಿಕೆ ಸಂಗ್ರಹಣೆ, ಸಂಸ್ಕರಣೆ ಹಾಗೂ ವಹಿವಾಟು ನಡೆಯುವ ಸ್ಥಳವನ್ನು ಪರಿಶೀಲಿಸಿತು.
ಕಡಿಮೆ ಗುಣಮಟ್ಟದ ಅಡಿಕೆಯನ್ನು ಉತ್ತಮ ದರ್ಜೆಯಂತೆ ತೋರಿಸುವ ಆರೋಪ
ಕಡಿಮೆ ದರ್ಜೆಯ ಅಡಿಕೆಯನ್ನು ಕೃತಕ ಬಣ್ಣ ಬಳಸಿ ಉತ್ತಮ ಗುಣಮಟ್ಟದ ಅಡಿಕೆಯಂತೆ ತೋರಿಸುವುದು ಮೋಸದ ಹಾಗೂ ಕಾನೂನುಬಾಹಿರ ವ್ಯವಹಾರ ಪದ್ಧತಿಯಾಗಿದೆ ಎಂದು ಡಾ. ಮೈತ್ರಿ ತಿಳಿಸಿದರು. ಇಂತಹ ಕೃತಕ ಬಣ್ಣಗಳ ಬಳಕೆಯಿಂದ ಅಡಿಕೆ ಬೆಳೆಗಾರರು ಮಾತ್ರವಲ್ಲದೆ, ಅಡಿಕೆಯನ್ನು ಬಳಸುವ ಗ್ರಾಹಕರ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಆಹಾರ ಪದಾರ್ಥಗಳಿಗೆ ಬಳಸಲು ಅನುಮತಿ ಇಲ್ಲದ ಕೈಗಾರಿಕಾ ರಾಸಾಯನಿಕ ಬಣ್ಣಗಳನ್ನು ಅಡಿಕೆಗೆ ಬಳಸುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಇಂತಹ ರಾಸಾಯನಿಕಗಳು ದೇಹದೊಳಗೆ ಸೇರಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
Also read>> ಗೋಕರ್ಣದ ಮಹಾಬಲೇಶ್ವರ ದೇವಾಲಯದ ವೈಭವ; ಶಿವಮೊಗ್ಗದಲ್ಲಿ ಕಣ್ಮನ ಸೆಳೆಯುತ್ತಿದೆ ಗಣೇಶೋತ್ಸವ!
ಆರೋಗ್ಯದ ಮೇಲೂ ದುಷ್ಪರಿಣಾಮ
ಅಡಿಕೆಗೆ ಕೃತಕ ಬಣ್ಣ ಹಾಕುವ ಸಂದರ್ಭದಲ್ಲಿ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿರುವ ಕೆಲವು ರಾಸಾಯನಿಕ ಬಣ್ಣಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ನಿರಂತರವಾಗಿ ಇಂತಹ ಬಣ್ಣ ಮಿಶ್ರಿತ ಅಡಿಕೆಯನ್ನು ಸೇವಿಸುವುದರಿಂದ ಬಾಯಿ ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ ಎಂದು ಡಾ. ಮೈತ್ರಿ ತಿಳಿಸಿದರು.
ಅಡಿಕೆ ಜಗಿಯುವ ಸಂದರ್ಭದಲ್ಲಿ ಬಣ್ಣ ನೇರವಾಗಿ ಬಾಯಿಯ ಲೋಳೆಪೊರೆಗೆ ಸಂಪರ್ಕಕ್ಕೆ ಬರುವುದರಿಂದ, ಆಹಾರಕ್ಕೆ ಬಳಸಲು ಅನುಮತಿ ಇಲ್ಲದ ರಾಸಾಯನಿಕಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Shivamogga : ಕೃತಕ ಬಣ್ಣ ಬಳಕೆಗೆ ಸಂಪೂರ್ಣ ನಿಷೇಧ
ಅಡಿಕೆಯಲ್ಲಿ ಯಾವುದೇ ರೀತಿಯ ಕೃತಕ ಬಣ್ಣ ಬಳಕೆಗೆ ಅವಕಾಶವಿಲ್ಲ. ಅಡಿಕೆಯನ್ನು ಹೊರರಾಜ್ಯಗಳಿಗೆ ಅಥವಾ ವಿದೇಶಗಳಿಗೆ ರಫ್ತು ಮಾಡುವ ಸಂದರ್ಭದಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾದರೆ ಸಂಪೂರ್ಣ ಲಾಟ್‌ಗಳನ್ನು ತಿರಸ್ಕರಿಸುವ ಪ್ರಕರಣಗಳು ನಡೆದಿವೆ. ಕರ್ನಾಟಕ ಹಾಗೂ ಕೇರಳದಿಂದ ರಫ್ತು ಮಾಡಲಾದ ಕೆಲವು ಅಡಿಕೆ ಲಾಟ್‌ಗಳು ಬಣ್ಣ ಬಳಕೆಯ ಕಾರಣದಿಂದ ತಿರಸ್ಕೃತಗೊಂಡಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಇಂತಹ ಘಟನೆಗಳಿಂದ ಅಡಿಕೆ ವ್ಯಾಪಾರಕ್ಕೆ ಮಾತ್ರವಲ್ಲದೆ, ರಾಜ್ಯದ ಅಡಿಕೆ ಬೆಳೆಗಾರರಿಗೂ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅಡಿಕೆ ಸಂಸ್ಕರಣೆ ಮತ್ತು ವಹಿವಾಟಿನಲ್ಲಿ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಾ. ಮೈತ್ರಿ ಸೂಚಿಸಿದರು.
ನೈಸರ್ಗಿಕ ವಿಧಾನದಲ್ಲೇ ಅಡಿಕೆಯ ಗುಣಮಟ್ಟ ಕಾಪಾಡಲು ಸೂಚನೆ
ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಅಡಿಕೆ ಶೀಘ್ರವಾಗಿ ಹಾಳಾಗುವ ಸಾಧ್ಯತೆ ಇದ್ದು, ಫಂಗಸ್ ಬೆಳೆಯುವ ಅಪಾಯವೂ ಇದೆ. ಇದರಿಂದ ಅಡಿಕೆಯ ನೈಸರ್ಗಿಕ ಸುವಾಸನೆ ಮತ್ತು ರುಚಿ ಕೂಡ ಹಾಳಾಗಬಹುದು ಎಂದು ಅವರು ಹೇಳಿದರು.
ಅಡಿಕೆಗೆ ಉತ್ತಮ ನೈಸರ್ಗಿಕ ಬಣ್ಣ ಮತ್ತು ಗುಣಮಟ್ಟವನ್ನು ತರಲು ರೈತರು ಹಾಗೂ ವ್ಯಾಪಾರಿಗಳು ಅಡಿಕೆಯನ್ನು ಸೂಕ್ತ ರೀತಿಯಲ್ಲಿ ಒಣಗಿಸುವುದು, ಉತ್ತಮ ತಳಿಯನ್ನು ಆಯ್ಕೆ ಮಾಡುವುದು ಹಾಗೂ ಸ್ವಚ್ಛ ಮತ್ತು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಣೆ ನಡೆಸುವುದು ಅಗತ್ಯ ಎಂದು ಡಾ. ಮೈತ್ರಿ ತಿಳಿಸಿದರು.
ಮಾದರಿ ಸಂಗ್ರಹ; ತಪ್ಪು ಕಂಡುಬಂದರೆ ಕಠಿಣ ಕ್ರಮ
ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಅಡಿಕೆಯ ಕೆಲವು ಮಾದರಿಗಳನ್ನು ಪಡೆದುಕೊಂಡರು. ಈ ಮಾದರಿಗಳ ಪರಿಶೀಲನೆಯ ಬಳಿಕ ಅಡಿಕೆಗೆ ಕೃತಕ ಅಥವಾ ನಿಷೇಧಿತ ರಾಸಾಯನಿಕ ಬಣ್ಣ ಬಳಕೆ ಮಾಡಿರುವುದು ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಕೆ ನೀಡಿದರು.
ರಾಸಾಯನಿಕಗಳನ್ನು ಬಳಸದೆ ಅಡಿಕೆಯನ್ನು ನಿಯಮಾನುಸಾರ ಸಂಸ್ಕರಿಸಿ, ಗುಣಮಟ್ಟ ಕಾಪಾಡಿಕೊಂಡು ವಹಿವಾಟು ನಡೆಸಬೇಕು. ರೈತರ ಶ್ರಮಕ್ಕೆ ಸೂಕ್ತ ಬೆಲೆ ಮತ್ತು ನ್ಯಾಯ ದೊರೆಯುವಂತೆ ವ್ಯಾಪಾರಿಗಳು ಹಾಗೂ ಸಂಸ್ಕರಣಾ ಘಟಕಗಳ ಮಾಲೀಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಪರಿಶೀಲನೆ ವೇಳೆ ತಹಶೀಲ್ದಾರ್ ರಾಜೀವ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ್, ಕೀರ್ತಿಕುಮಾರ್, ಶ್ರವಣಕುಮಾರ್, ಶ್ವೇತಾ, ಸುಮಾ, ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







