ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರದ ಪರ್ತಕರ್ತ ಮಹೇಶ್ ಹೆಗಡೆ ಅವರಿಗೆ ಜೀವ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮತ್ ಮತ್ತು ಪ್ರದೀಪ್ ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‌ಕುಮಾರ್ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಸಾಗರ ಪಟ್ಟಣದ ನ್ಯೂ ಬಿ.ಹೆಚ್. ರಸ್ತೆಯ ಸ್ವಾತಿ ವೆಚ್ ಹೋಟೆಲ್‌ಗೆ ಮೇ. 31ರ ಶನಿವಾರ ಮಹೇಶ್ ಹೆಗಡೆ ಅವರು ತಮ್ಮ ಸ್ನೇಹಿತರ ಜೊತೆ ಹೋಗಿದ್ದಾಗ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.
ಮಹೇಶ್ ಹೆಗಡೆಯವರು ಅಕ್ರಮ ಜಮೀನು ಒತ್ತುವರಿ ಸೇರಿದಂತೆ ವಿವಿಧ ಭೂಮಾಪಿಯಾಕ್ಕೆ ಸಂಬಂಧಸಿದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ವರದಿಗಳನ್ನು ನಿಷ್ಪಕ್ಷಪಾತವಾಗಿ ಮಾಡುತ್ತ ಬಂದಿದ್ದಾರೆ. ಇದನ್ನು ಸಹಿಸದ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್ ನಮ್ಮ ವಿರುದ್ಧ ಸುದ್ದಿ ಬರುತ್ತೀಯಾ, ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ವಸ್ತುನಿಷ್ಠವಾಗಿ ವರದಿ ಮಾಡುವುದು ಪತ್ರಕರ್ತರ ಆದ್ಯ ಕರ್ತವ್ಯ. ಆದರೆ ತಮ್ಮ ವಿರುದ್ಧ ಸುದ್ದಿ ಬರೆಯಲಾಗಿದೆ ಎಂದು ಬಾವಿಸಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಹೇಶ್ ಹೆಗಡೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರ ವಿರುದ್ಧ ಸಾಕಷ್ಟು ಹಗರಣಗಳ ಆರೋಪವಿದೆ. ಪತ್ರಕರ್ತರಾಗಿ ಸಾಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಹೇಶ್ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿ, ಅಶ್ಲೀಲ ಪದಬಳಸಿ ಕೊಲೆ ಬೆದರಿಕೆ ಹಾಕಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್‌ರನ್ನು ತಕ್ಷಣ ಬಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿದೆ.
ಈ ರೀತಿ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಟ್ಟಿನಿಟ್ಟಿನ ಕಾನೂನು ಕ್ರಮ ಆಗಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಯಾವ ಪತ್ರಕರ್ತನೂ ನಿರ್ಭಿತಿಯಿಂದ ವರದಿ ಮಾಡಲು ಸಾಧ್ಯವಾಗುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯ ಹರಣವಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಸಂಘ ತಿಳಿಸಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯಎನ್. ರವಿಕುಮಾರ್, ರಾಷ್ಟ್ರೀಯ ಸಮಿತಿಯ ಬಂಡಿಗಡಿ ನಂಜುಂಡಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಹಾಲಸ್ವಾಮಿ, ಕೆ.ಎಸ್. ಹುಚ್ರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಪ್ರಮುಖರಾದ ನಾಗರಾಜ್ ಶೆಣೈ, ಭರತ್‌ರಾಜ್‌ಸಿಂಗ್, ಯೋಗರಾಜ್, ಆರುಂಡಿ ಶ್ರೀನಿವಾಸ್, ಮಂಜುನಾಥ್, ಶಿವಾನಂದ್, ರಾಜು, ಇಸ್ಮಾಯಿಲ್ ಕುಟ್ಟಿ, ಅಬ್ದುಲ್ ರಜಾಕ್, ಲಿಂಗನಗೌಡ, ರಘುರಾಜ್, ಗುರುಪ್ರಸಾದ್, ರಂಜನ್, ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















