ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರ ಮೇಲೆ ನಡೆದ ಹಲ್ಲೆ ಯತ್ನವನ್ನು ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಫಕೀರಪ್ಪ ಭಜಂತ್ರಿ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜಿ. ಪಲ್ಲವಿ ಮತ್ತು ಪ್ರಭಾವತಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆ ಎಂದು ನೋಡದೇ ಅಸಭ್ಯವಾಗಿ ವರ್ತಿಸಲಾಗಿದೆ. ಮೈಮೇಲಿನ ಬಟ್ಟೆ ಎಳೆಯಲಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಸಭೆಯ ವಿಚಾರಗಳು ಏನೇ ಇರಲಿ, ಮಹಿಳೆಯೊಬ್ಬರ ಮೇಲೆ ಈ ರೀತಿಯ ಶೋಷಣೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹುದು ಎಂದರು.
ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕೊರಮ ಮತ್ತು ಇತರ 51 ಉಪ ಜಾತಿಗಳ ಸಮ್ಮೇಳನದ ಬಗ್ಗೆ ಎಲ್ಲಾ 51 ಸಮಾಜದ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ನೇತೃತ್ವವನ್ನು ಮಾಜಿ ಸಚಿವ ಹೆಚ್. ಆಂಜನೇಯ ವಹಿಸಿದ್ದರು. ಈ ಸಭೆಯಲ್ಲಿ ಬಿಜೆಪಿ ಪ್ರಚೋದಿತ ಮುಖಂಡರು ಹಲ್ಲೆ ಮಾಡಿದ್ದಾರೆ. ಪ್ರಮುಖವಾಗಿ ಲೋಹಿತ್ ಮತ್ತು ಇತರ 7 ಜನ ಇದಕ್ಕೆ ಕಾರಣರಾಗಿದ್ದಾರೆ. ಸಭೆ ಯಶಸ್ವಿಯಾಗಬಾರದು ಎಂದೋ ಅಥವಾ ಮತ್ಯಾವುದೋ ರಾಜಕೀಯ ಕಾರಣಕ್ಕೋ ಈ ರೀತಿಯ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈಗಾಗಲೇ ಹಲವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ರವೀಂದ್ರಕುಮಾರ್ ಕೆ.ಆರ್. ಮಾತನಾಡಿ, ಪಲ್ಲವಿ ಅವರು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮೇಲೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅಲೆಮಾರಿಗಳ ಬದುಕಿನ ಚಿತ್ರಣವನ್ನು ಸರ್ಕಾರದ ಗಮನಕ್ಕೆ ತಂದು ನೆರವು ನೀಡುತ್ತಿದ್ದಾರೆ. ಸದಾ ಕ್ರಿಯಾಶೀಲರಾಗಿದ್ದಾರೆ. ಇವರ ಶಕ್ತಿಯನ್ನು ಕುಂದಿಸುವ ಕೆಲಸ ಮಾಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತವಾಗಿದೆ. ಯಾವುದೇ ಮಹಿಳೆ ಮೇಲೆ ಈ ರೀತಿಯ ದೌರ್ಜನ್ಯ ನಡೆಯಬಾರದು. ನಮ್ಮದು ಕಟ್ಟಕಡೆಯ ಜಾತಿ. ಇಂತಹ ಜಾತಿಯ ಮೇಲೂ ದೌರ್ಜನ್ಯ ಆಗುತ್ತದೆ ಎಂದರೆ ಹೇಗೆ? ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಕೆ. ದಿವಾಕರ್, ಕೃಷ್ಣಮೂರ್ತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post