ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಧಿಕೃತವಲ್ಲದ ವೆಬ್‌ತಾಣಗಳಲ್ಲಿ ಕುವೆಂಪು ವಿಶ್ವವಿದ್ಯಾಲಯದ 35 ಜನ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಪದ್ಧತಿಯಲ್ಲಿ ಅಳವಡಿಸಲಾದ ನೂತನ ತಂತ್ರಜ್ಞಾನ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ವಸತಿ ಮತ್ತು ಇನ್ನಿತರೆ ಅನುಕೂಲಗಳನ್ನು ಕಲ್ಪಿಸಿರುವುದಕ್ಕೆ ಸಂಬಂದಿಸಿದಂತೆ, ಅಪೂರ್ಣ ಮತ್ತು ಸತ್ಯಕ್ಕೆ ದೂರವಾದ ಮಾಹಿತಿಯೊಂದಿಗೆ ಜೈಭೀಮ್ ಕನ್ನಡ ಜಾಗೃತಿ ಮತ್ತು ಎಸ್‌ಸಿಎಸ್‌ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘ ಶಿವಮೊಗ್ಗ ಈ ಹೆಸರಿನ ಸಂಘಟನೆಗಳು, ಸಾಮಾಜಿಕ ಮಾಧ್ಯಮಲ್ಲಿರುವ ಅಧಿಕೃತವಲ್ಲದ ವೆಬ್‌ತಾಣಗಳಲ್ಲಿ ಕುಲಾಧಿಪತಿಗಳು, ಸರ್ಕಾರ, ಕುಲಪತಿಗಳು, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ವಿಶ್ವವಿದ್ಯಾಲಯದ ಇಬ್ಬರು ವಿಶ್ರಾಂತ ಕುಲಪತಿಗಳನ್ನೂ ಒಳಗೊಂಡಂತೆ ಸುಮಾರು 35 ಜನ ಅಧ್ಯಾಪಕರು/ಸಿಬ್ಬಂದಿಗಳ ಮೇಲೆ ಆರೋಪವನ್ನು ಮಾಡಿ ದೂರನ್ನು ದಾಖಲಿಸಿರುತ್ತದೆ. ಸದರಿ ಸಂಘಟನೆಯು ಸುಳ್ಳು ಮತ್ತು ಸತ್ಯಕ್ಕೆ ದೂರವಾದ ಮಾಹಿತಿಗಳೊಂದಿಗೆ ವಿಶ್ವವಿದ್ಯಾಲಯದ ಘನತೆಗೆ ಚ್ಯುತಿ ತರುತ್ತಿರುವುದರಿಂದ ಸಂಘಟನೆಯ ವಿರುದ್ಧ ವಿಶ್ವವಿದ್ಯಾಲಯವು ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾಲಯದ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುವಾಗ ವಿಶ್ವವಿದ್ಯಾಲಯದ ನಿಯಮಗಳು ಹಾಗೂ ವಿಶ್ವವಿದ್ಯಾಲಯದ ಸಂಬಂಧಿಸಿದ ಇನ್ನಿತರ ಪ್ರಾಧಿಕಾರಗಳು ನೀಡುವ ಅನುಮೋದನೆ/ಆದೇಶದ ಅನುಸಾರವಾಗಿಯೇ ಕ್ರಮಕೈಗೊಂಡಿರುತ್ತಾರೆ. ಇದೇ ಪರಿಸ್ಥಿತಿಯು ಮುಂದುವರೆದರೆ, ವಿಶ್ವವಿದ್ಯಾಲಯದ ಯಾವುದೇ ಅಧ್ಯಾಪಕರು ಮತ್ತು ಸಿಬ್ಬಂದಿಯು ನೆಮ್ಮದಿಯಿಂದ ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುವುದು ಬಹಳ ಕಷ್ಟಸಾಧ್ಯವಾಗುತ್ತದೆ. ಅಧ್ಯಾಪಕರ ಮತ್ತು ಅದ್ಯಾಪಕೇತರ ಸಿಬ್ಬಂದಿಯ ಮೇಲೆ ದಾಖಲಾಗುವ ದೂರುಗಳು ಕೇವಲ ಅಧ್ಯಾಪಕರ ವ್ಯಕ್ತಿತ್ವಕ್ಕೆ ಧಕ್ಕೆಯನ್ನು ತರುವುದಲ್ಲದೇ, ಇಡೀ ವಿಶ್ವವಿದ್ಯಾಲಯದ ಘನತೆಗೂ ಚ್ಯುತಿಯನ್ನು ಉಂಟುಮಾಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುವುದಲ್ಲದೇ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ಆರೋಪಗಳು ಬಂದಾಗ, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ವಿಶ್ವವಿದ್ಯಾಲಯದಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಪ್ರಸಾರ ಮಾಡುವಂತೆ ಅವರು ಕೋರಿದ್ದಾರೆ.
ಈ ಹಿಂದಿನಿಂದಲೂ ವಿಶ್ವವಿದ್ಯಾಲಯದ ಅಭಿವೃದ್ಧಿಯಲ್ಲಿ ಎಲ್ಲರೂ ಸಹಕಾರ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿಯೂ ಸಹ ವಿಶ್ವವಿದ್ಯಾಲಯದ ಘನತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಕುಲಪತಿ ವಿನಂತಿಸಿದ್ದಾರೆ.
ಕುವೆಂಪು ವಿವಿ ಹಿನ್ನೆಲೆ:
ಜಿಲ್ಲೆಯ ಭದ್ರಾನದಿಯ ದಂಡೆಯಮೇಲೆ ರಾಷ್ಟ್ರಕವಿ, ವಿಶ್ವಮಾನವ ಜ್ಞಾನಪೀಠ ಪುರಸ್ಕೃತ ಕುವೆಂಪುರವರ ಹೆಸರನ್ನು ಹೊತ್ತು 1982ರಲ್ಲಿ ಸ್ಥಾಪಿತಗೊಂಡ ಕುವೆಂಪು ವಿಶ್ವವಿದ್ಯಾಲಯವು ಇಲ್ಲಿಯವರೆಗೂ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಾ ಬಂದಿದೆ. ಕಳೆದ ಸುಮಾರು ಮೂರುವರೆ ದಶಕಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಅಧ್ಯಯನ ಮಾಡಿ ವಿವಿಧ ಪದವಿಗಳನ್ನು ಪಡೆದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾ ವಿಶ್ವವಿದ್ಯಾಲಯದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
1982 ರಿಂದ ಮೊದಲುಗೊಂಡು ಇಲ್ಲಿಯವರೆಗೂ ಅನೇಕ ಕುಲಪತಿಗಳು, ವಿವಿಧ ಅಧಿಕಾರಿಗಳು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ತಮ್ಮದೇ ಆದ ಶೈಲಿಯಲ್ಲಿ ವಿಶ್ವವಿದ್ಯಾಲಯದ ಏಳಿಗೆಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇದೆಲ್ಲದರ ಫಲಶೃತಿಯಾಗಿ ಈ ವಿಶ್ವವಿದ್ಯಾಲಯವು ನ್ಯಾಕ್ ಎ ಗ್ರೇಡ್, ಎನ್.ಐ.ಆರ್.ಎಫ್. 73ನೇ ರ್‍ಯಾಂಕ್, ಸೈಮ್ಯಾಗೋ ರ್‍ಯಾಂಕ್ ಹಾಗೂ ಇನ್ನಿತರೆ ಪುರಸ್ಕಾರ ಮನ್ನಣೆಗಳಿಗೆ ಭಾಜನವಾಗಿದೆ. ಇದರಿಂದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ದೇಶ-ವಿದೇಶದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ಹಾಗೂ ಮನ್ನಣೆಯು ಲಭಿಸುತ್ತಿದೆ. ಕೇವಲ ಮೂರುವರೆ ದಶಕಗಳಲ್ಲಿಯೇ ಕುವೆಂಪು ವಿಶ್ವವಿದ್ಯಾಲಯವು ರಾಜ್ಯದ ಇತರೆ ಹಿರಿಯ ವಿಶ್ವವಿದ್ಯಾಲಯಗಳನ್ನು ಸರಿಗಟ್ಟುವ ಮಟ್ಟಕ್ಕೆ ಬೆಳೆದಿರುವುದು ಅತ್ಯಂತ ಹೆಮ್ಮಯ ವಿಷಯವಾಗಿದೆ. ಇದು ಇಡೀ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂದ ಗೌರವವೇ ಆಗಿದೆ.
ವಿದ್ಯಾರ್ಥಿಗಳ ಉತ್ಕೃಷ್ಟ ಕಲಿಕೆ, ಸಂಶೋಧನೆ, ಪದವಿ ಫಲಿತಾಂಶದ ನಿಖರತೆ ಮತ್ತು ಭದ್ರತೆಗಾಗಿ ವಿಶ್ವವಿದ್ಯಾಲಯವು ಕಾಲಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನವನ್ನು ಬಳವಡಿಸಿಕೊಂಡು ಲೋಪರಹಿತ ಹಾಗೂ ವಿದ್ಯಾರ್ಥಿ ಸ್ನೇಹಿ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಅದರಲ್ಲೂ, ಪರೀಕ್ಷಾ ಕೆಲಸಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿಯೇ ಪ್ರಪ್ರಥಮಬಾರಿಗೆ ಅತಿನೂತನ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪರೀಕ್ಷಾ ವಿಭಾಗದಲ್ಲಿದ್ದ 1988 ರಿಂದ 2000 ಅವಧಿಯ ಕೈಬರಹದ ಅಂಕಗಳ ಲೆಡ್ಜರ್‌ಗಳ ಡಿಜಿಟಲೀಕರಣ, ರಕ್ಷಣಾತ್ಮಕ ವ್ಯವಸ್ಥೆ ಒಳಗೊಂಡಂತೆ ಪರೀಕ್ಷಾ ಕಾರ್ಯಗಳ ಗಣಕೀಕರಣ, ಪರೀಕ್ಷಾ ಮಿತ್ರ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ. ಕರ್ನಾಟಕ ಸರ್ಕಾರವು ಕುವೆಂಪು ವಿಶ್ವವಿದ್ಯಾಲಯದ ಈ ಕ್ರಮವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಶ್ಲಾಘಿಸಿದೆ ಹಾಗೂ ರಾಜ್ಯದ ಇತರೆ ವಿಶ್ವವಿದ್ಯಾಲಯಗಳಿಗೂ ಈ ರೀತಿಯ ಕ್ರಮವನ್ನು ಅಳವಡಿಸಿಕೊಳ್ಳುವಂತೆ ಸಲಹೆಯನ್ನೂ ಸಹ ನೀಡಿರುತ್ತದೆ.
ಕುವೆಂಪು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಅಧಿನಿಯಮದಡಿಯಲ್ಲಿ ಸ್ಥಾಪಿತವಾದ ಸಂಸ್ಥೆಯಾಗಿದ್ದು, ಸರ್ಕಾರವು ನೇಮಕ ಮಾಡುವ ಕುಲಪತಿ, ಸಕ್ಷಮ ಪ್ರಾಧಿಕಾರಗಳು ಹಾಗೂ ಸರ್ಕಾರದ ನಿಯಮ/ಆದೇಶಗಳನ್ವಯ ಕಾರ್ಯಗಳನ್ನು ನಿರ್ವಹಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಮತ್ತು ಸಂಶೋಧನೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಕಾರ್ಯಗತಗೊಳಿಸುವಾಗ, ವಿಶ್ವವಿದ್ಯಾಲಯವು ನೀಡುವ ಯಾವುದೇ ಹೆಚ್ಚುವರಿ ಜವಾಬ್ದಾರಿಗಳನ್ನು ಅಧ್ಯಾಪಕರುಗಳು/ಸಿಬ್ಬಂದಿವರ್ಗದವರು ನಿಯಮಾನುಸಾರ ಪಾರದರ್ಶಕವಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ ಎಂದು ವಿವರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post