ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ದಂತ ವೈದ್ಯಕೀಯ ಸಂಘ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಆ.2ರಂದು ತಾಲ್ಲೂಕಿನ ಸುಮಾರು 25 ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಗೌತಮ್ ಬಿ.ಎಂ. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ದಂತ ವೈದ್ಯಕೀಯ ಸಂಘವು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಮುಖ್ಯವಾಗಿ ದಂತ ಆರೋಗ್ಯದ ಬಗ್ಗೆ ಹಲವು ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಜತ ಮಹೋತ್ಸವದ ಸಂದರ್ಭದಲ್ಲಿ ತಾಲ್ಲೂಕಿನ ಸುಮಾರು 25 ಸರ್ಕಾರಿ ಶಾಲೆಗಳಲ್ಲಿ ಉಚಿತ ತಪಾಸಣೆ ಮತ್ತು ಮಾಹಿತಿಯನ್ನು ನೀಡಲಾಗುವುದು. ಅಲ್ಲದೆ ಎಲ್ಲಾ ಮಕ್ಕಳಿಗೂ ಟೂತ್ ಬ್ರಶ್ ಮತ್ತು ಟೂತ್ ಪೇಸ್ಟನ್ನು ಸಂಘದ ವತಿಯಿಂದ ಉಚಿತವಾಗಿ ವಿತರಿಸಲಾಗುವುದು ಎಂದರು.

ಸಂಘವು ಈಗಾಗಲೇ 2024 ಡಿಸೆಂಬರ್‍ನಿಂದ ಇಲ್ಲಿಯವರೆಗೆ ಸುಮಾರು 112 ದಂತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದು, 7892 ಮಕ್ಕಳಿಗೆ ತಪಾಸಣೆ ನಡೆಸಲಾಗಿದೆ. ಅದರಲ್ಲಿ 2713 ವಿದ್ಯಾರ್ಥಿಗಳಿಗೆ ದಂತ ಚಿಕತ್ಸೆಯನ್ನು ಉಚಿತವಾಗಿ ಮಾಡಲಾಗಿದೆ. ಜೊತೆಗೆ 2815 ಓರಲ್ ಕೇರ್ ಕಿಟ್ಸ್‍ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಕ್ರಮ ಎಸ್. ಕೆದ್ಲಾಯ, ಡಾ. ಸತೀಶ್ ಚಂದ್ರ ಎನ್., ಡಾ. ಸಾದ್ವಿಕ್, ಡಾ. ಸುರೇಶ್, ಹೇಮಾ, ಡಾ. ರವಿಕಿರಣ್, ಡಾ. ವೀರೇಶ್, ಡಾ. ಜಯವದನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post