ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಸಹಚೇತನ ನಾಟ್ಯಾಲಯದ ವತಿಯಿಂದ ಆ.22, 23 ಹಾಗೂ 24ರಂದು ಪ್ರತಿದಿನ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ನೃತ್ಯ ಮಹೋತ್ಸವ ‘ನಾಟ್ಯಾರಾಧನಾ-14’ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆ.22ರಂದು ಮಹೋತ್ಸವವನ್ನು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಖ್ಯಾತ ಸಂಗೀತ ವಿದ್ವಾಂಸ ಶೃಂಗೇರಿ ಹೆಚ್.ಎಸ್. ನಾಗರಾಜ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಹಚೇತನ ನಾಟ್ಯಾಲಯದ ಗೌರವ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. ನಂತರ ನ್ಯಾಟ್ಯಾಲಯದ ವಿದ್ಯಾರ್ಥಿಗಳಿಂದ ಸಂತ ಕವಿಗಳ ಭಕ್ತಿಮಾರ್ಗದ “ಭಕ್ತಿ ಸುಧಾರಸ” ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
ಆ.23ರಂದು ಜಯದೇವ ಅಷ್ಟಪದಿಯ ಶೃಂಗಾರ ಮಾಲಿಕೆಯ “ರಾಧಾ ಮಾಧವ ವಿಲಾಸ” ಸಹನಾ ಚೇತನ್ ಏಕವ್ಯಕ್ತಿ ನೃತ್ಯ ಪ್ರದರ್ಶಿಸಲಿದ್ದಾರೆ. ನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ “ಅಭಂಗ್ ವಾಣಿ” ಭಜನ್-ಅಭಂಗ್ ನೃತ್ಯ ಮಾಧುರ್ಯವಿದೆ ಎಂದರು.
ಆ.24ರಂದು ಒರಿಸ್ಸಾದ ರುದ್ರಾಕ್ಷ್ ಫೌಂಡೇಷನ್‍ನ ವಿದ್ಯಾರ್ಥಿಗಳಿಂದ “ಒಡಿಸ್ಸಿ ನೃತ್ಯ” ಹಾಗೂ ಅಸ್ಸಾಂನ ರಂಗಧಾಲಿ ಡಾನ್ಸ್ ಟ್ರೂಪ್‍ನಿಂದ “ಬಿಹು ನೃತ್ಯ”ವಿದೆ. ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ ಆಗಮಿಸಲಿದ್ದಾರೆ.
20 ವರ್ಷದ ಹಿಂದೆ ಮೂರ್ನಾಲ್ಕು ವಿದ್ಯಾರ್ಥಿಗಳಿಂದ ಆರಂಭವಾದ ಈ ನಾಟ್ಯಾಲಯದಲ್ಲಿ ಪ್ರಸ್ತುತ 270 ವಿದ್ಯಾರ್ಥಿಗಳು ನೃತ್ಯ ಕಲಿಯುತ್ತಿದ್ದಾರೆ. ಈ ಮಹೋತ್ಸವದಲ್ಲಿ ನಾಟ್ಯಾಲಯದ 170 ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ನಾಗಮಣಿ, ವಿನಯ್, ಆನಂದರಾಮ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post