ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಂಜಾ ಅಮಾನತ್ತು ಪಡಿಸಿಕೊಳ್ಳಲು ಆರೋಪಿತರ ಮನೆಗೆ ಹೋದ ಪೊಲೀಸರ ಮೇಲೆ ಹಲ್ಲೆ #Attack on police ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 17, 500ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಘಟನೆ ಹಿನ್ನೆಲೆ
2022ರಲ್ಲಿ ಕುಂಸಿ ಠಾಣೆ ವ್ಯಾಪ್ತಿಯ ಆಯನೂರು ಸಮೀಪದ ಮಂಡಘಟ್ಟದಲ್ಲಿ ಈ ಘಟನೆ ನಡೆದಿತ್ತು. ಪಿಎಸ್ ಐ ನವೀನ್ ಮಠಪತಿ ಮತ್ತು ಠಾಣೆಯ ಸಿಬ್ಬಂದಿಯವರು ಗಾಂಜಾ ಕೇಸ್ ಹಿನ್ನೆಲೆಯಲ್ಲಿ ಮಧುಕುಮಾರ್‌ನನ್ನು ಬಂಧಿಸಿದ್ದರು. ನಂತರ ಆತನನ್ನು ಹೆಚ್ಚಿನ ವಿಚಾರಣೆಗೆ ಕರೆದೊಯ್ಯುವ ವೇಳೆ ಮತ್ತೊಬ್ಬ ಸಹೋದರ ಮನುಕುಮಾರ್ ಪಿಎಸ್‌ಐಗೆ ಹಲ್ಲೆ ನಡೆಸಿದ್ದನು. ಬಳಿಕ ಮಧು ಸಹ ತಪ್ಪಿಸಿಕೊಂಡು ದೊಣ್ಣೆಯಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದನು ಮತ್ತು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿ ಓಡಿಹೋಗಿದ್ದನು.
ಪೊಲೀಸರು ಕರ್ತವ್ಯಕ್ಕೆ ಅಡ್ಡಪಡಿಸಿ ಹಲ್ಲೆ ಮಾಡಿದವರ ವಿರುದ್ಧ ಪಿಎಸ್‌ಐ ರವರು ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆ ಯಲ್ಲಿ ಕಾನೂನು ರಿತ್ಯಾ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಆಗಿನ ತನಿಖಾಧಿಕಾರಿ ಗ್ರಾಮಾಂತರ ಸಿಪಿಐ ಆಗಿದ್ದ ಸಂಜೀವ್‌ಕುಮಾರ್ (ಹಾಲಿ ಡಿವೈಎಸ್ಪಿ ಶಿವಮೊಗ್ಗ ಉಪವಿಭಾಗ) ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು. 3ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಯಶವಂತ ಕುಮಾರ್ ಫೆ. 6ರಂದು ಮೊದಲ ಆರೋಪಿ ಮಂಡಘಟ್ಟದ ಮನುಕುಮಾರ್ ಅಲಿಯಾಸ್ ಮನು (23) ಮತ್ತು ಎರಡನೆಯ ಅರೋಪಿ ಮಧುಕುಮಾರ್ ಅಲಿಯಾಸ್ ಮಧು (24) ಇವರಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಹಾಗೂ ಹಲ್ಲೆಗೊಳಗಾದ ಎಸ್ ಐ ನವೀನ್ ಮಠಪತಿ ಅವರಿಗೆ 20, 000ರೂ. ಪರಿಹಾರವನ್ನು, ಸಾಕ್ಷಿದಾರರಾದ ಬಸವಂತಪ್ಪರವರಿಗೆ 10,000 ರೂ. ವನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















