ಕಲ್ಪ ಮೀಡಿಯಾ ಹೌಸ್ | ಇರುವಕ್ಕಿ(ಶಿವಮೊಗ್ಗ) |
ಬಂಡವಾಳ ಇಲ್ಲದೇ ಬೆಳೆದು ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ ಎಂದು ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹೇಶ್ವರಪ್ಪ ಎಂದು ಅಭಿಪ್ರಾಯಪಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ನಿಮಿತ್ತ ಹಳೇಮುಗಳಗೆರೆ ಗ್ರಾಮದಲ್ಲಿ ಬಿದಿರು ಸಸ್ಯಗಳ ಬೆಳೆಸುವಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ. ಅದರ ಪಾಡಿಗೆ ಅದು ಬೆಳೆಯುತ್ತದೆ. ರೋಗ ಕೀಟ ಬಾಧೆ ಸಮಸ್ಯೆ ಈ ಬೆಳೆಗಿಲ್ಲ. ಹಣ ಬೇಕಾದಾಗ ಬಿದಿರು ಕಡಿಯಬಹುದು. ಇಲ್ಲವಾದರೆ ಹಾಗೇ ಬಿಡಬಹುದು. ಬಿದಿರು ಬೇಸಾಯಕ್ಕೆ ಬಂಡವಾಳ ಬೇಕಿಲ್ಲ ಎಂದರು.
Also read: ಬೆಂಗಳೂರು | ವೈಕುಂಠ ಏಕಾದಶಿ ಪ್ರಯುಕ್ತ ಮಲ್ಲೇಶ್ವರಂನಲ್ಲಿ ಅಖಂಡ ಭಾಗವತ ಪ್ರವಚನ
ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ಪ್ರತಿ ವರ್ಷವೂ ಬಿದಿರು ಕಟಾವು ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಸಾಧ್ಯ. ಮಾರಿಹಾಳ ಜಾತಿಯ ಬಿದಿರು ಬುಟ್ಟಿ ಮಾಡಲು ಬಳಕೆಯಾಗುತ್ತದೆ. ಮುಳ್ಳು ರಹಿತ. ಈ ಜಾತಿಯ ಬಿದಿರನ್ನು ಮೇದಾರರು ಹೆಚ್ಚು ಖರೀದಿಸುತ್ತಾರೆ.20 ರಿಂದ 25 ಅಡಿಯ ಒಂದು ಬಿದಿರಿಗೆ 100 ರೂ.ಬೆಲೆ ಸಿಗುತ್ತದೆ ಎಂದರು.
ಆದಾಯದ ಜತೆ ಅನುಕೂಲ
4 ವರ್ಷಗಳಿಂದ 45 ವರ್ಷಗಳ ವರೆಗೆ ನಿರಂತರ ಆದಾಯ ನೀಡುತ್ತದೆ. ಮಳೆ ಕೊರತೆಯಾಗಿ ಬೆಳೆಗಳು ಫಲ ಬಿಡದ ಸಂದರ್ಭದಲ್ಲಿ ಬಿದಿರು ಆದಾಯ ಕೊಡಬಲ್ಲದು. ತೋಟದ ಬದಿಯಲ್ಲಿ, ಬದುಗಳಲ್ಲಿ ಬಿದಿರು ಬೆಳೆಯುವುದರಿಂದ ಮಣ್ಣಿನ ಸವಕಳಿಯಾಗುವುದಿಲ್ಲ. ಬಿದಿರು ಇರುವಲ್ಲಿ ನೀರು ಭೂಮಿಯಲ್ಲಿ ಇಂಗಿ ತಂಪಿನ ವಾತಾವರಣ ನಿರ್ಮಾಣವಾಗುತ್ತದೆ. ಹಸಿರು ಸೃಷ್ಟಿಯಾಗುತ್ತದೆ ಎಂದರು.
ಮಾರಿಹಾಳ ಜಾತಿಯ ಬಿದಿರು ಗಟ್ಟಿಯಾಗಿರುವುದರಿಂದ ಬುಟ್ಟಿ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಎರಡೂ ಪ್ರದೇಶದಲ್ಲಿ ಈ ಜಾತಿಯ ಬಿದಿರು ಚೆನ್ನಾಗಿ ಬೆಳೆಯುತ್ತದೆ. ಮಾಲ್ಕಿ ಜಮೀನಿನಲ್ಲಿ ಬೆಳೆದ ಬಿದಿರನ್ನು ರೈತರೇ ಮಾರಾಟ ಮಾಡಬಹುದು. ಬಿದಿರು ಕಟಾವು ಮತ್ತು ಸಾಗಣೆ ಮಾಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ ಎಂದು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 100 ಜನ ಸೇರಿದ್ದರು ಎಲ್ಲರಿಗೂ ಎರೆಡೆರೆಡು ಬಿದಿರು ಸಸ್ಯಗಳನ್ನು ವಿತರಿಸಲಾಯಿತು.
ಕೃಷಿ ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ದಪ್ಪ ಕಣ್ಣೂರ್, ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸತೀಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post