ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂದಿನಿಂದ ಜೂನ್ 7ರವರೆಗೆ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿಯಾದ ಬೆನ್ನಲ್ಲೇ ಈ ಅವಧಿಯಲ್ಲಿ ಬ್ಯಾಂಕ್‌ಗಳು ಸಹ ತೆರೆಯುವುದಿಲ್ಲ ಎಂಬ ಗೊಂದಲಕ್ಕೆ ಈಗ ಸ್ಪಷ್ಟ ಉತ್ತರ ದೊರೆತಿದೆ.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಸೋಮವಾರದಿಂದ ಬ್ಯಾಂಕ್‌ಗಳೂ ಸಹ ತೆರೆಯುವುದಿಲ್ಲ ಎಂದು ಘೋಷಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬ ಸುದ್ದಿಗಳು ಹರಿದಾಡ ತೊಡಗಿತು. ಇದು ಸಾರ್ವಜನಿಕರಲ್ಲಿ ಬಹಳಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಈ ಕುರಿತಂತೆ ಜಿಲ್ಲಾಧಿಕಾರಿಗಳು ಕಲ್ಪ ಮೀಡಿಯಾ ಹೌಸ್‌ಗೆ ಸ್ಪಷ್ಟನೆ ನೀಡಿದ್ದು, ಈ ಅವಧಿಯಲ್ಲಿ ಬ್ಯಾಂಕ್‌ಗಳು ತೆರೆದಿರುತ್ತವೆ ಆದರೆ, ಅತ್ಯಂತ ಪ್ರಮುಖ ಹಾಗೂ ಅನಿವಾರ್ಯ ವಹಿವಾಟುಗಳನ್ನು ಮಾತ್ರ ನಡೆಸಬಹುದಾಗಿದೆ. ಇದರ ಹೊರತಾಗಿ ಸಣ್ಣ-ಪುಟ್ಟ ವ್ಯವಹಾರಗಳಿಗೆ ಗ್ರಾಹಕರು ಅನಾವಶ್ಯಕವಾಗಿ ತೆರಳಬಾರದು ಎಂದಿದ್ದಾರೆ.
ಎಸ್‌ಎಲ್‌ಬಿಸಿ ಮಾರ್ಗಸೂಚಿಯಲ್ಲೇನಿದೆ:
ಇನ್ನು ಬ್ಯಾಂಕ್ ವ್ಯವಹಾರ ಕುರಿತಂತೆ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಎಲ್ಲಾ ಬ್ಯಾಂಕ್‌ಗಳಿಗೆ ಮಾರ್ಗಸೂಚಿ ಹೊರಡಿಸಿದ್ದು, ವಹಿವಾಟಿನ ಅವಧಿಯನ್ನು ಬೆಳಗ್ಗೆ ೧೦ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಿಗಧಿಪಡಿಸಿದೆ. ಈ ಹಿಂದೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೂ ಗ್ರಾಹಕರಿಗೆ ವಹಿವಾಟು ನಡೆಸಲು ಅವಕಾಶವಿತ್ತು. 4ಗಂಟೆಯವರೆಗೂ ಸಿಬ್ಬಂದಿಗಳಿಗೆ ಕಚೇರಿ ಕೆಲಸ ನಿರ್ವಹಿಸಲು ಅವಕಾಶವಿತ್ತು. ಆದರೆ, ನೂತನ ಮಾರ್ಗಸೂಚಿಯಂತೆ ಗ್ರಾಹಕರಿಗೆ ಮಧ್ಯಾಹ್ನ 1ಗಂಟೆಯವರೆಗೂ ಮಾತ್ರ ಅವಕಾಶವಿದ್ದು, ಉಳಿದೆಲ್ಲಾ ಕೆಲಸಗಳನ್ನು ಸಿಬ್ಬಂದಿಗಳು ಮುಕ್ತಾಯಗೊಳಿಸಿ 2ಗಂಟೆಯ ಒಳಗಾಗಿ ಶಾಖೆಗಳು ಮುಚ್ಚಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಅಗತ್ಯಾನುಸಾರ ಶೇ.50ರಷ್ಟು ಸಿಬ್ಬಂದಿಗಳು ಮಾತ್ರ ಪ್ರತಿದಿನ ಕರ್ತವ್ಯ ನಿರ್ವಹಿಸಬಹುದು ಎಂದು ಉಲ್ಲೇಖಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post