ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಸಂಯೋಗ ಕನೆಕ್ಟಿಂಗ್ ಆರ್ಟ್ಸ್ ಸಂಸ್ಥೆಯ ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ತನುಶ್ರೀ ಕುಲಕರ್ಣಿ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ.
ಫೆ. 9ರಂದು ಬಸವೇಶ್ವರ ನಗರದ ಕೆಇಎ ಪ್ರಭಾತ ರಂಗಮಂದಿರದಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿರುವ ರಂಗ ಪ್ರಸ್ತುತಿ ‘ನೃತ್ಯ ಶಿವೆ’ಗೆ ವಿದ್ಯಾಸಂಸ್ಕಾರ ಪ. ಪೂರ್ವ ಕಾಲೇಜು ಪ್ರಾಂಶುಪಾಲ ಜಿ.ವಿ. ವಿನಯ್, ವೈದ್ಯ ಮತ್ತು ಆಪ್ತ ಸಮಾಲೋಚಕ ಡಾ. ಗುರುರಾಜ ಪಾಟೀಲ, ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಸಾಕ್ಷಿ ಕುಲಕರ್ಣಿ ಅವರು ಸಾಕ್ಷಿ ಯಾಗಲಿದ್ದಾರೆ.

ತನುಶ್ರೀ ಕುಲಕರ್ಣಿ ಒಬ್ಬ ವಿಧೇಯ ವಿದ್ಯಾರ್ಥಿನಿ. ನೃತ್ಯದ ಬಗ್ಗೆ ಈಕೆಗೆ ಶ್ರದ್ಧೆ ಮತ್ತು ಉತ್ಸಾಹ ಎರಡೂ ಇದೆ. ಇಡೀ ಕುಟುಂಬವು ಕಲಾರಾಧನೆಗೆ ಬದ್ಧವಾಗಿರುವುದರಿಂದ ತನುಶ್ರೀ ಭವಿಷ್ಯದಲ್ಲೂ ಭರತನಾಟ್ಯ ಕಲೆಯನ್ನು ಉಳಿಸಿ- ಬೆಳೆಸುವ ಸಂಪೂರ್ಣ ಭರವಸೆ ಇದೆ.
-ವಿದುಷಿ ಲತಾ ಲಕ್ಷ್ಮೀಶ, ಸಂಯೋಗ ಕನೆಕ್ಟಿಂಗ್ ಆರ್ಟ್ಸ್ ಸಂಸ್ಥೆ, ಬೆಂಗಳೂರು

ತನುಶ್ರೀ ಕುಲಕರ್ಣಿ ಭರತನಾಟ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡು ಈಗಾಗಲೇ ಮೈಸೂರು ದಸರಾ, ತಿರುಪತಿ, ಪಾಂಡಿಚೆರಿ ಮತ್ತು ಆನೆಗೊಂದಿ ಉತ್ಸವಗಳಂಥ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಗುರುವಿನೊಂದಿಗೆ ಪಡ ಮೂಡಿಸಿದ್ದಾರೆ ಎಂಬುದು ಹೆಮ್ಮೆ ಎನಿಸಿದೆ. ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಬಹುಮಾನಗಳು ಈ ಯುವ ಕಲಾವಿದೆಗೆ ಅರಸಿ ಬಂದಿವೆ.
ಹಿಮ್ಮೇಳ
ರಂಗಪ್ರವೇಶಕ್ಕೆ ನಟುವಾಂಗದಲ್ಲಿ ವಿದುಷಿ ಲತಾ, ಗಾಯನದಲ್ಲಿ ವಿದ್ವಾಂಸ ನಂದ ಕುಮಾರ, ಮೃದಂಗದಲ್ಲಿ ಜನಾರ್ದನ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ಕೊಳಲು ವಾದನದಲ್ಲಿ ಜಯರಾಮ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಹಿಮ್ಮೇಳ ಸಹಕಾರ ನೀಡಲಿದ್ದಾರೆ.

ಕಲಾವಿದೆ ತನುಶ್ರೀ ಅವರು ಆರಂಭಿ ರಾಗದ ಪುಷ್ಪಾಂಜಲಿಯೊಂದಿಗೆ ನರ್ತನ ಪ್ರಸ್ತುತಿ ಆರಂಭಿಸಲಿದ್ದಾರೆ.ಅಭೇರಿ ರಾಗದ ಅಭಂಗ, ತೋಡಿರಾಗದ ವರ್ಣ ಗಳಲ್ಲಿ ಕಲಾಭಿವೃತ್ತಿಯನ್ನು ಪಡಮೂಡಿಸಲಿದ್ದಾರೆ. ರೇವತಿರಾಗದ ಕೃತಿ, ದೇವರ ನಾಮ ನಂತರ ದೇಶ್ ರಾಗದ ತಿಲ್ಲಾನದೊಂದಿಗೆ ಭರತನಾಟ್ಯ ಪ್ರದರ್ಶನಕ್ಕೆ ಮಂಗಳ ಹಾಡಲಿದ್ದಾರೆ.
ಕಲಾರಾಧನೆಗೆ ಬದ್ಧವಾದ ಕುಟುಂಬ
ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಗೃಹಿಣಿ ಸಾಕ್ಷಿ ಕುಲಕರ್ಣಿ ಅವರ ಪುತ್ರಿ ತನುಶ್ರೀಗೆ ಭರತನಾಟ್ಯ ಎಂದರೆ ಅದೊಂದು ಪ್ಯಾಷನ್. ವಿದ್ವತ್ ಪರೀಕ್ಷೆ ನಂತರ ತನ್ನದೇ ಆದ ಕಲಾಬದುಕನ್ನು ಕಟ್ಟಿಕೊಳ್ಳಲು ಸಂಕಲ್ಪ ಮಾಡಿದ್ದಾರೆ. ತಾಯಿಯ ಅಪೇಕ್ಷೆಯಂತೆ ನೃತ್ಯ ಕಲಿಕೆಗೆ ಅಡಿ ಇಟ್ಟ ಈಕೆಗೆ ತಂದೆ ಶಶಿಧರ ಅವರ ಸಂಪೂರ್ಣ ಬೆಂಬಲ ಮತ್ತು ಶ್ರೀರಕ್ಷೆ ಇದೆ ಎಂಬುದನ್ನು ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post