ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ನಗರ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಯ ಮುಖಾಂತರ ಅನ್ಯಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಹಾಗೂ ಓಂಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿ ಅಕ್ರಮದ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಅವರು ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದ ಪ್ರಕಾರ ನ್ಯಾಯಬೆಲೆ ಅಂಗಡಿಗಳು ಮಂಗಳವಾರ ಹೊರತುಪಡಿಸಿ, ಪ್ರತಿ ತಿಂಗಳು ಬೆಳಿಗ್ಗೆ 8ರಿಂದ 12, ಸಂಜೆ 4ರಿಂದ 8 ಗಂಟೆಯವರೆಗೆ ಬಾಗಿಲು ತೆರೆಯಬೇಕು ಎಂಬ ಆದೇಶವಿದ್ದರೂ ಭದ್ರಾವತಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಿಂಗಳಲ್ಲಿ 2-3 ದಿನ ಮಾತ್ರ ಬಾಗಿಲು ತೆಗೆಯುವುದರಿಂದ ಪಡಿತರದಾರರಿಗೆ ಅನಾನುಕೂಲವಾಗುತ್ತಿದೆ. ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಆಹಾರ ನಿರೀಕ್ಷಕರು ಶಾಮೀಲಾಗಿ ಅನ್ಯಭಾಗ್ಯ ಪಡಿತರ ಅಕ್ಕಿಯನ್ನು ಕಾಳಸಂತೆಯನ್ನು ಒಂದು ಕೆ.ಜಿ.ಗೆ 20 ರೂ.ನಂತೆ ಮಾಡುತ್ತಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಪಟ್ಟಿದೆ.
ಭದ್ರಾವತಿಯ ಜನ್ನಾಪುರದ ಓಂಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿ ವ್ಯಾಪ್ತಿಗೆ ಸುಮಾರು 25ಕ್ಕೂ ಹೆಚ್ಚು ಸ್ಲಂಗಳು ಸೇರಿದ್ದು, 11 ಸಾವಿರ ಗ್ರಾಹಕರಿದ್ದಾರೆ. ಇದರಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ಯಾಸ್ ಏಜೆನ್ಸಿಯವರು ನಿಗಧಿತ ಬೆಲೆಗಿಂತ 60 ರೂ. ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದು, ಈ ಎರಡೂ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಕೂಡಲೇ ವಿತರಕರ ಮಾನ್ಯತೆ ರದ್ದುಮಾಡಬೇಕು. ಇವರ ಪರವಾಗಿ ಕೆಲಸ ಮಾಡುತ್ತಿರುವ ಆಹಾರ ಇಲಾಖಾ ನಿರೀಕ್ಷಕರನ್ನು ಇಲಾಖೆಯ ಹಂತದಲ್ಲಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ದಕ್ಷ ಅಧಿಕಾರಿಗಳನ್ನು ನೇಮಿಸಿ ಭದ್ರಾವತಿ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post