ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಲಕ್ಷಾಂತರ ಮಂದಿಗೆ ಅನ್ನ, ಜೀವನ ನೀಡಿರುವ ಐತಿಹಾಸಿಕ ವಿಐಎಸ್’ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಾಗರಿಕರು ನಮ್ಮೊಂದಿಗೆ ಕೈಜೋಡಿಸಿ ಎಂದು ಸ್ನೇಹಜೀವಿ ಬಳಗದ ಉಮೇಶ್(ಪೊಲೀಸ್ ಇಲಾಖೆ) ಕರೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ರಾಜ್ಯದ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಇತಿಹಾಸ ಪರಿಚಯ ಭದ್ರಾವತಿಯ ವಿಐಎಸ್’ಎಲ್ ಕಾರ್ಖಾನೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. 102 ವರ್ಷದ ಹಿಂದೆ, ಜಗತ್ತು ಕಂಡ ಮಹಾನ್ ಎಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿ ಹಾಗೂ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಕಾಳಜಿಯ ಕೊಡುಗೆಯೊಂದಿಗೆ ಸ್ಥಾಪಿತವಾದ ಅಮೋಘ ಕೊಡುಗೆಯಿದು ಎಂದರು.
ದೇಶದ ರಕ್ಷಣಾ, ಸಾರಿಗೆ, ಆಟೋಮೊಬೈಲ್, ಅಂತರಿಕ್ಷ ಕ್ಷೇತ್ರ ಹಾಗೂ ಮೂಲಭೂತ ಕ್ಷೇತ್ರಗಳಿಗೆ ತನ್ನದೇ ಬ್ರಾಂಡ್’ನ ವಿಶೇಷ ಉಕ್ಕನ್ನು ಸರಬರಾಜು ಮಾಡುತ್ತ, ಭಾರತ ಅಭಿವದ್ಧಿ ಹೊಂದುತ್ತಿರುವ ದೇಶವಾಗುವಲ್ಲಿ ವಿಐಎಸ್’ಎಲ್ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಇನ್ನು ಕಾರ್ಖಾನೆಯಲ್ಲಿ ದುಡಿದು ತಮ್ಮ ಬದುಕು ಕಟ್ಟಿಕೊಂಡ ಸಾವಿರಾರು ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದುದರ ಪರಿಣಾಮ ಕಾರ್ಮಿಕರ ಮಕ್ಕಳು ತಮ್ಮದೇ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನ ಗಳಲ್ಲಿ ಜಗತ್ತಿನ ಮೂಲೆ ಮೂಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಇಂದಿಗೂ ಕೂಡ ಭದ್ರಾವತಿಯ ಆರ್ಥಿಕತೆ ಈ ವಿಐಎಸ್’ಎಲ್ ಕಾರ್ಖಾನೆ ಮೇಲೆಯೇ ಅವಲಂಭಿತವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಹಿಂದಿನಿಂದ ಇಂದಿನವರೆಗೂ ಆಳಿದ ಹಾಗೂ ಆಳುತ್ತಿರುವ ರಾಜಕೀಯ ನೇತಾರರು ಈ ಕಾರ್ಖಾನೆಯ ಉದ್ದೇಶ, ಇತಿಹಾಸ, ಖ್ಯಾತಿ, ಅವಶ್ಯಕತೆಗಳನ್ನು ತಿಳಿಯದೇ ಇದೊಂದು ಚುನಾವಣಾ ವಸ್ತುವಾಗಿರಿಸಿಕೊಂಡಿರುವುದು ನಮ್ಮ ದುರದೃಷ್ಟವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಇಚ್ಛಾಶಕ್ತಿ ಕೊರತೆ ವಿಐಎಸ್’ಎಲ್’ನ ಇಂದಿನ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಆದರೆ ಕಾರ್ಖಾನೆಯ ಇಂದಿನ ಪರಿಸ್ಥಿತಿಗೆ ಅವರಿವರನ್ನು ದೂಷಿಸುವ ಬದಲು, ರಾಜ್ಯದ, ಜಿಲ್ಲೆಯ ಹೆಮ್ಮೆಯ ಭದ್ರಾವತಿಯ ಆಧಾರ, ಸಾವಿರಾರು ಬಡ ಕಾರ್ಮಿಕರ ಅನ್ನ ದೈವವಾಗಿರುವ ಒಂದು ಐತಿಹಾಸಿಕ ಉದ್ಯಮ ನಸಿಶಿ ಹೋಗುತ್ತಿರುವಾಗ, ರಾಜ್ಯದ, ಜಿಲ್ಲೆಯ ಜವಾಬ್ದಾರಿಯುತ ಪ್ರಜೆಗಳು ಅದಕ್ಕೆ ಮೂಕ ಸಾಕ್ಷಿಗಳಾಗಿರುವುದು ಎಷ್ಟು ಸರಿ ಎಂದಿದ್ದಾರೆ.
ಈಗಲೂ ಒಂದು ಐತಿಹಾಸಿಕ ಕಾರ್ಖಾನೆಯ ಉಳಿವಿಗಾಗಿ ನಮ್ಮೆಲ್ಲರ ಅದರಲ್ಲೂ ಜವಾಬ್ದಾರಿಯುತ ಮಾಧ್ಯಮದವರ ಧ್ವನಿ ಎದ್ದು ಕಾರ್ಖಾನೆ ಉಳಿದಲ್ಲಿ ಬಡ ಕಾರ್ಮಿಕರ ಬದುಕು ಹಸನವಾಗುತ್ತದೆ. ಅವರ ಹಾರೈಕೆ ಪ್ರತಿಯೊಬ್ಬರನ್ನು ಕಾಯುತ್ತದೆ. ಇಂತಹ ನೈತಿಕ ಜವಾಬ್ದಾರಿಯನ್ನು ತೋರಿದಾಗ ಮಾತ್ರ ಒಂದು ಸಮಾಜದಲ್ಲಿ ಬದುಕಿದ್ದುದಕ್ಕೂ ಸಾರ್ಥಕ. ನಮ್ಮ ಈ ಐತಿಹಾಸಿಕ ಬೃಹತ್ ಉದ್ಯಮ ಮಣ್ಣಲ್ಲಿ ಮಣ್ಣಾಗಿ ಇತಿಹಾಸ ಸೇರುವ ಮುನ್ನ ಕಾರ್ಖಾನೆ ಉಳಿಸಲು ಕೈ ಜೋಡಿಸೋಣ. ಈ ಹೋರಾಟಕ್ಕೆ ಸ್ನೇಹಜೀವಿ ಬಳಗದೊಂದಿಗೆ ಕೈಜೋಡಿಸಿ ಎಂದು ಉಮೇಶ್ ಕರೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post