ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕಾರ್ಖಾನೆ ಖಾಸಗೀಕರಣದ ವಿರುದ್ಧ ಹಾಗೂ ನಿವೃತ್ತ ಕಾರ್ಮಿಕರಿಗೆ ವಸತಿಗೃಹಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ವಿಐಎಸ್’ಎಲ್ ಕಾರ್ಖಾನೆ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಕಾರ್ಖಾನೆಯ ಖಾಸಗೀಕರಣದಿಂದ ಕಾರ್ಖಾನೆ ಶಾಶ್ವತವಾಗಿ ನಶಿಸಿಹೋಗಲಿದ್ದು, ಇದನ್ನೇ ನಂಬಿರುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಉದ್ಯೋಗ ಕಳೆದುಕೊಂಡು, ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿದ್ದ ವಸತಿಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಿತರಣೆ ಮಾಡಿದ್ದು ಇಂದು ಖಾಸಗೀಕರಣದ ನೆಪಹೇಳಿ, ಮನೆ ಖಾಲಿ ಮಾಡಿಸಿ ಎಲ್ಲರನ್ನೂ ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದರು.
2016ರಲ್ಲಿ ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಅಗತ್ಯವಾಗಿರುವ ಗಣಿಯನ್ನು ಮಂಜೂರು ಮಾಡಿದರೆ, ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿ ಮುನ್ನಡೆಸುವುದಾಗಿ ಹೇಳಿದ್ದರು. ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಸಂಡೂರು ತಾಲೂಕಿನಲ್ಲಿ 140 ಎಕರೆ ಗಣಿ ಮಂಜೂರು ಮಾಡಿತ್ತು. ಆದರೂ ಸಹ ಇಂದು ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಯಾವುದೇ ಕಾರಣಕ್ಕೂ ವಿಐಎಸ್’ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಬಾರದು, ಗುತ್ತಿಗೆ ಕಾರ್ಮಿಕರಿಗೆ 26 ದಿನ ಕೆಲಸ ಕೊಡಬೇಕು ಹಾಗೂ ವಿಐಎಸ್’ಎಲ್ ನಿವೃತ್ತ ಕಾರ್ಮಿಕರಿಗೆ ವಿತರಿಸಿರುವ ಮನೆಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರೇಗೌಡ, ನರಸಿಂಹಾಚಾರ್, ಪ್ರಜಾಪ್ರತಿನಿಧಿ ಸುರೇಶ್, ಬಸಂತಕುಮಾರ್, ಅಮೃತ್, ರಾಘವೇಂದ್ರ, ಮೋಹನ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್ ಹಾಗೂ ಸಿಬ್ಬಂದಿಗಳು, ಗುತ್ತಿಗೆ ಕಾರ್ಮಿಕರು ಹಾಗೂ ನಿವೃತ್ತ ನೌಕರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post