ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಸಿದ್ದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಲ್ಲಿಂದ ಹೊರಟ ಕೆಲವೇ ನಿಮಿಷದಲ್ಲಿ ಹೃದಯಾಘಾತಕ್ಕೊಳಗಾಗಿ ಎಮ್.ಬಿ. ಭಾನುಪ್ರಕಾಶ್ ಅವರ ಅಗಲಿಕೆ ಆರ್‌ಎಸ್‌ಎಸ್ ಹಾಗೂ ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭಾನುಪ್ರಕಾಶ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದರು. ಅಲ್ಲದೆ ಕಾರ್ಯಕರ್ತರಿಗೆ ರಘುಪತಿ ರಾಘವ ರಾಜಾರಾಮ್ ಹಾಡು ಹೇಳಿಕೊಟ್ಟಿದ್ದರು. ಇದಾದ ಕೆಲವೇ ನಿಮಿಷದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಪಕ್ಷಕ್ಕೆ ತೀವ್ರ ಆಘಾತವಾಗಿದೆ.
ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಇಂದು ಬೆಳಿಗ್ಗೆ ಬಿಜೆಪಿ ವತಿಯಿಂದ ಪ್ರತಿಭಟನೆ ಹಾಗೂ ಶಿವಪ್ಪನಾಯಕ ವೃತ್ತದಿಂದ ಅಣಕು ಶವಯಾತ್ರೆ ನಡೆಸಲಾಯಿತು. ಎಂ.ಬಿ. ಭಾನುಪ್ರಕಾಶ್ ಮತ್ತು ನಾನು ಅಣಕು ಶವಯಾತ್ರೆಯ ನೇತೃತ್ವ ವಹಿಸಿದ್ದೆವು. ಮಧ್ಯಾಹ್ನ 12.30ರ ಹೊತ್ತಿಗೆ ಪ್ರತಿಭಟನೆ ಬಳಿಕೆ ಎಲ್ಲರು ಹೊರಡಲು ಸಿದ್ಧವಾಗಿದ್ದೆವು. ಕಾರು ಹತ್ತುವ ವೇಳೆ ಭಾನುಪ್ರಕಾಶ್ ಅವರು ತುಂಬಾ ಸುಸ್ತಾಗುತ್ತಿದೆ ಎಂದರು. ಕಾರಿಗೆ ಹತ್ತುವಾಗಲೆ ಕುಸಿದರು. ಕೂಡಲೆ ಅವರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದೆವು. ಪರೀಕ್ಷೆ ಮಾಡಿದ ವೈದ್ಯರು, ಭಾನುಪ್ರಕಾರ್ಶ ಅವರು ಮೃತಪಟ್ಟು ಏಳೆಂಟು ನಿಮಿಷ ಕಳೆದಿದೆ ಎಂದು. ನಮಗೆಲ್ಲ ಮಾರ್ಗದರ್ಶನ ಮಾಡಿದ್ದರು. ದೊಡ್ಡ ಸಂಖ್ಯೆಯ ಕಾರ್ಯಕರ್ತರಿಗೆ ನೋವಾಗಿದೆ.
ಡಿ.ಎಸ್. ಅರುಣ್, ವಿಧಾನಪರಿಷತ್ ಸದಸ್ಯ
ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಎಂ.ಬಿ. ಭಾನುಪ್ರಕಾಶ್, ಆರ್‌ಎಸ್‌ಎಸ್ ಹಾಗೂ ಬಿಜೆಪಿಯಲ್ಲಿ ತಳಹಂತದಿಂದ ಸಕ್ರಿಯವಾಗಿ ಗುರುತಿಸಿಕೊಂಡವರು. ಸರಳ, ಸಜ್ಜನ ನಾಯಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಇವರು ಸತ್ಯ ನಿಷ್ಠೆ, ರಾಷ್ಟ್ರಭಕ್ತಿಯಲ್ಲಿ ಅನನ್ಯ ಶ್ರದ್ದೆಯುಳ್ಳವರು ಮಾತ್ರವಲ್ಲದೆ ಉತ್ತಮ ವಾಗ್ಮಿ ಸಹ ಆಗಿದ್ದರು.
Also read: ಪ್ರತಿಭಟನೆ ವೇಳೆ ಕುಸಿದು ಬಿದ್ದು ಮಾಜಿ ಎಮ್‌ಎಲ್‌ಸಿ ಎಂ.ಬಿ. ಭಾನುಪ್ರಕಾಶ್ ವಿಧಿವಶ
2001ರಿಂದ 2005ರವರೆಗೆ ಗಾಜನೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಯೂ ಸಹ ಬಾನುಪ್ರಕಾಶ್ ಸೇವೆ ಸಲ್ಲಿಸಿದ್ದರು.
ಹಿಂದೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿಯೂ ಸಹ ಇವರು ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟರ್ ಅನುಯಾಯಿಯಾಗಿದ್ದ ಇವರು ಸಂಘದ ವಿಚಾರಧಾರೆ ಹಾಗೂ ಸಂಘದ ಮೂಲಕ ರಾಷ್ಟ್ರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಹಿರಿಯ ಮುಖಂಡ.
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿದ ವೇಳೆ ಅವರ ಎದುರಾಳಿಯಾಗಿ ಭಾನುಪ್ರಕಾಶ್ ಸ್ಪರ್ಧಿಸಿದ್ದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ದಕ್ಷಿಣ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್ ಉಸ್ತುವಾರಿಯಾಗಿಯೂ ಸಹ ಭಾನುಪ್ರಕಾಶ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post