ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾವತಿಯ ವಿಐಎಸ್’ಎಲ್ ಕಾರ್ಖಾನೆಯಲ್ಲಿ ಮುಂಬರುವ ಶನಿವಾರ ಅಥವಾ ಭಾನುವಾರದಿಂದಲೇ ಆಕ್ಸಿಜನ್ ಉತ್ಪಾದನೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಕೋವಿಡ್ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾದ ಈ ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಸರ್.ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾದ ವಿಐಎಸ್’ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವೂ ಸಹ ಇದೆ. ಈ ಹಿಂದೆ ಎಂಎಸ್’ಪಿಎಲ್ ಕಂಪೆನಿಯ ಸಹಭಾಗಿತ್ವದಲ್ಲಿ ಘಟಕ ಆರಂಭವಾಗಿತ್ತು. ಆದರೆ, ಅದು ಕಳೆದ ಎರಡು ವರ್ಷಗಳಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಈಗ ಇಂತಹ ತುರ್ತು ಸಂದರ್ಭದಲ್ಲಿ ಎಂಎಸ್’ಪಿಎಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಇದೇ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಇಲ್ಲಿ ಸುಮಾರು 36 ತಂಡಗಳು ಕಾರ್ಯ ನಿರ್ವಹಿಸಿದರೆ, 150 ಕೆಎಲ್ ಸಾಮರ್ಥ್ಯದ ಸುಮಾರು 1000 ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್’ಗಳನ್ನು ಭರ್ತಿ ಮಾಡಬಹುದು. ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಜವಾಬ್ದಾರಿ ಎಂಎಸ್’ಪಿಎಲ್ ಕಂಪೆನಿ ಮಾಡಿದರೆ, ಅದನ್ನು ಸಿಲಿಂಡರ್’ಗೆ ತುಂಬಿಸುವ ಕಾರ್ಯವನ್ನು ವಿಐಎಸ್’ಎಲ್ ಮಾಡುತ್ತದೆ ಎಂದರು.
ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವುದಕ್ಕೆ ಪ್ರತಿ ತಿಂಗಳು ಅಂದಾಜು 10 ರಿಂದ 12 ಲಕ್ಷ ರೂ. ವೆಚ್ಚ ತಗಲುತ್ತದೆ. ಪ್ರತಿದಿನ ಉತ್ಪಾದನೆಗಾಗಿ 2 ಲಕ್ಷ ರೂ. ವಿದ್ಯುತ್ ಬಿಲ್ ಅಂದಾಜಿಸಲಾಗಿದ್ದು, ಇದನ್ನು ಜಿಲ್ಲಾಡಳಿತ ಪಾವತಿಸಲಿದೆ. ಈ ಕುರಿತಂತೆ ಎಲ್ಲ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿದ್ದು, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರೂ ಸಹ ಭೇಟಿ ನೀಡಲಿದ್ದಾರೆ ಎಂದರು.
ಆಕ್ಸಿಜನ್ ಉತ್ಪಾದನೆಗಾಗಿ ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಈಗಾಗಲೇ ಆರಂಭಿಸಿದ್ದು, ಬಹುತೇಕ ಇದೇ ಶನಿವಾರ ಅಥವಾ ಭಾನುವಾರದಿಂದ ಉತ್ಪಾದನೆ ಆರಂಭವಾಗಲಿದೆ. ಇಲ್ಲಿ ಉತ್ಪಾದನೆ ಆರಂಭವಾದ ನಂತರ ಜಿಲ್ಲೆಯಲ್ಲಿರುವ ಆಕ್ಸಿಜನ್ ಕೊರತೆ ನೀಗಲಿದೆ ಎಂದರು.
ಉತ್ಪಾದನೆ ಆರಂಭವಾದ ಅತಿ ಶೀಘ್ರದಲ್ಲಿ ಪ್ರಮಾಣವನ್ನು ಹೆಚ್ಚಿಸಿ, ನಮ್ಮ ಜಿಲ್ಲೆಯೊಂದಿಗೆ ಆಕ್ಸಿಜನ್ ಅಗತ್ಯವಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಸಹ ರವಾನಿಸುವ ಆಶಯ ಹೊಂದಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















