ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಟ್ ಕಾಯಿನ್ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸುಳ್ಳಿನ ಕಂತೆಗಳನ್ನು ನಿಜ ಮಾಡಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್. ದತ್ತಾತ್ರಿ ಆರೋಪಿಸಿದ್ದಾರೆ.
ಮೊದಲನೆಯದಾಗಿ ಇದು ಹಗರಣವೋ ಅಲ್ಲವೋ ಎಂಬುದೇ ಯಕ್ಷ ಪ್ರಶ್ನೆಯಾಗಿರುವ ಈ ಸಂಧರ್ಭದಲ್ಲಿ, ಕಾಂಗ್ರೆಸ್ ಇದೊಂದು ದೊಡ್ಡದಾದಂತ ರಾಷ್ಟ್ರೀಯ ಹಗರಣ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ನೋಡಿದರೆ ಅವರಿಗಿರುವ ಈ ಬಿಟ್ ಕಾಯಿನ್ ಬಗೆಗಿನ ಪರಮ ಜ್ಞಾನದ ಬಗ್ಗೆ ತಿಳಿದು ಜನರಿಂದ ಕಾಂಗ್ರೆಸ್ ಅಪಹಾಸ್ಯಕ್ಕೊಳಗಾಗುತ್ತಿದೆ ಎಂದು ಹೇಳಿದ್ದಾರೆ.
ಇದುವರೆಗೂ ಕ್ರಿಪ್ಟೋಕರೆನ್ಸಿ ಗೆ ಸರ್ಕಾರ ಯಾವುದೇ ರೀತಿಯ ಮಾನ್ಯತೆಯನ್ನು ನೀಡಿರುವುದಿಲ್ಲ ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಡೆಯುತ್ತಿರುವ ವ್ಯವಹಾರ ಆಗಿರುವುದರಿಂದ ಸರ್ಕಾರ ಅದರ ಬಗ್ಗೆ ಅಷ್ಟಾಗಿ ಇನ್ನೂ ತಲೆ ಕೆಡಿಸಿಕೊಂಡಿಲ್ಲ. ಹೇಗೆ SEBI ಅನ್ನೋ ಸಂಸ್ಥೆ ಷೇರು ಮಾರುಕಟ್ಟೆಯ ನಿಯಂತ್ರಣಕ್ಕಿದೆಯೋ ಹಾಗೆ ಆ ರೀತಿಯಾದ ಯಾವುದೇ ಸಂಸ್ಥೆ ಬಿಟ್ ಕಾಯಿನ್ ನ ನಿಯಂತ್ರಣಕ್ಕಾಗಿ ಇಲ್ಲ. ಹೀಗಿರುವಾಗ ಕಾಂಗ್ರೆಸ್ ಅನವಶ್ಯಕವಾಗಿ ರಾಜ್ಯ ಸರ್ಕಾರದಮೇಲೆ ಗೂಬೆ ಕೂರಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಕಾಂಗ್ರೆಸ್ ಗೆ ಬಿಜೆಪಿಯ ಮೇಲೆ ಆರೋಪಗಳನ್ನು ಹೇರಲು ಏನು ಸಿಗದೇ ಸುಳ್ಳಿನ ಕಂತೆಗಳನ್ನೇ ಹುಡುಕುತ್ತಿದ್ದಾರೆ. ಕಳೆದ ಬಾರಿ ರಫೇಲ್ ವಿಚಾರ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದರು. ಈಗ ಬಿಟ್ ಕಾಯಿನ್ ಹಗರಣ ಪ್ರಸ್ತಾಪಿಸುತ್ತಿದ್ದಾರೆ.
ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಯಾರೋ ಮಾಡಿರುವ ಈ ಆರ್ಥಿಕ ಮೋಸವನ್ನು ಈಗ ಕಾಂಗ್ರೆಸ್ ಮುಂದಿಟ್ಟುಕೊಂಡು ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡುವ ಬದಲು ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯು ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆಯನ್ನು ನೀಡಿದೆ. ನಾಲ್ಕು ಪುಟಗಳ ಪತ್ರಿಕಾ ಹೇಳಿಕೆಯನ್ನು ನೀಡಿರುವ ಪೊಲೀಸ್ ಇಲಾಖೆ, ಬಿಟ್ ಕಾಯಿನ್ ವರ್ಗಾವಣೆ ಆರೋಪವನ್ನು ಅಲ್ಲಗಳೆದಿದೆ. ಹ್ಯಾಕರ್ ಶ್ರೀಕಿ ಖಾತೆಯಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ. ಯಾವುದೇ ಬಿಟ್ ಕಾಯಿನ್ ಕಳವೂ ಆಗಿಲ್ಲ. ಪ್ರಕರಣ ಬಹಿರಂಗವಾಗಿ ಒಂದು ವರ್ಷ ಕಳೆದ ನಂತರ ಈಗ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದ ಅಪವಾದ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನೂ 14,682 ಬಿಟ್‌ಫೈನೆಕ್ಸ್ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರತಿಪಾದಿಸಿರುವುದರಲ್ಲಿ ಯಾವುದೇ ಹುರುಳಿಲ್ಲ. ಆರೋಪಿಗಳ ಬಂಧನಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಕ್ಕಿದ್ದರೂ ಇಲ್ಲಿಯವರೆಗೆ ಯಾವುದೇ ವಿದೇಶಿ ಕಾನೂನು ಜಾರಿ ಸಂಸ್ಥೆಗಳು, ಯಾವುದೇ ವಿದೇಶಿ ಕಂಪನಿಗಳು ಯಾವುದೇ ಹ್ಯಾಕಿಂಗ್ ಬಗ್ಗೆ ಪೊಲೀಸರನ್ನು ಸಂಪರ್ಕಿಸಿಲ್ಲ ಎಂಬುದು ಸತ್ಯ ಎಂದು ತಿಳಿಸಿದ್ದಾರೆ.
ಬಿಟ್‌ಫೈನೆಕ್ಸ್ ಕಂಪನಿಯ ಪ್ರತಿನಿಧಿಗಳು ಸಹ ಹ್ಯಾಕಿಂಗ್ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಆಪಾದಿತ ನಡೆಸಿರುವ 15 ವಹಿವಾಟಿನ ನಂತರ ಸುಮಾರು ಒಂದು ವರ್ಷ ಕಳೆದಿದ್ದರೂ, ಬಿಟ್‌ಫೈನೆಕ್ಸ್/ ಕಾನೂನು ಜಾರಿ ಏಜೆನ್ಸಿಗಳ ಯಾವುದೇ ಪ್ರತಿನಿಧಿಗಳು ಪೊಲೀಸರು ಅಥವಾ ಯಾವುದೇ ಸಂಬಂಧಪಟ್ಟ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಆರೋಪಿಯು ತನ್ನ ಸ್ವಯಂಪ್ರೇರಿತ ಹೇಳಿಕೆಯ ಸಮಯದಲ್ಲಿ ಯಾವುದೇ ನಿರ್ದಿಷ್ಟ ವಿವರಗಳಿಲ್ಲದೆ ವೆಬ್‌ಸೈಟ್‌ಗಳ ಹ್ಯಾಕಿಂಗ್ ಸಂಬಂಧ ಹೇಳಿದ್ದಾನೆ. ಇದನ್ನು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ತನಿಖೆಯನ್ನು ನಡೆಸಲಾಯಿತು. ಸೈಬರ್ ತಜ್ಞರು ಡಿಜಿಟಲ್ ಸಾಕ್ಷ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಆರೋಪಿಯ ಹೆಚ್ಚಿನ ಪ್ರತಿಪಾದನೆಗಳು ಆಧಾರರಹಿತವಾಗಿವೆ ಎಂದು ತಿಳಿದುಬಂದಿದೆ.
ಬಸವರಾಜ್ ಬೊಮ್ಮಾಯಿ ಯವರು ಗೃಹ ಸಚಿವರಾಗಿದ್ದ ಹಿಂದಿನ ಸರ್ಕಾರದಲ್ಲೇ ತನಿಖೆಗೆ ಅದೇಶಮಾಡಲಾಗಿತ್ತು. ಹೀಗಿರುವಾಗ ಕಾಂಗ್ರೆಸ್ ಆರೋಪಿಸಿರುವಂತೆ ಬೊಮ್ಮಾಯಿ ಅವರು ಇದಕ್ಕೆ ಸೂತ್ರಧಾರ ಹೇಗಾಗುತ್ತಾರೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೇವಲ ತನಿಖೆಗೆ ಆದೇಶ ನೀಡಿಲ್ಲ. ಡಿಐಜಿ ಮಟ್ಟದಲ್ಲಿ ತಂಡ ರಚನೆ ಮಾಡಿದ್ದಾರೆ. ಆ ತಂಡಕ್ಕೆ ಸೈಬರ್ ತಜ್ಞರನ್ನು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಹತಾಶೆಯಿಂದ ಮಾಡುತ್ತಿರುವ ಸುಳ್ಳು ಆರೋಪದ ಮೂಲಕ ರಾಜ್ಯದ ಜನರ ದಾರಿ ತಪ್ಪಿಸಲು ಸಾದ್ಯವಿಲ್ಲ. ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ ಅತೀ ಶೀಘ್ರದಲ್ಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ, ಆರೋಪ ಮಾಡುತ್ತಿರುವರ ಬಣ್ಣ ಬಯಲಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post