ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಬೇಕು ಎಂಬ ದುರಾಸೆಯಿಂದ ಬಿಜೆಪಿ ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ ಜನ ಇವರ ಮಾತನ್ನು ನಂಬುವುದಿಲ್ಲ. 150ಕ್ಕೂ ಹೆಚ್ಚು ಸ್ಥಾನ ಗಳಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸಿಎಂ ಸ್ಥಾನ, ಶಾಸಕ ಸ್ಥಾನ ಎಲ್ಲಾ ಹೋಯ್ತು. ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹಂಬಲದಿಂದ ಇಂತಹ ಆಟ ಆಡುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಕಾಂಗ್ರೆಸ್‌ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬರುವವರಿದ್ದಾರೆ ಎಂದರು.
ಬಿಜೆಪಿ ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ತಾನು ಮುಖ್ಯಮಂತ್ರಿ ಆಗಿದ್ದ ವೇಳೆ ಭ್ರಷ್ಟಾಚಾರ ಮಾಡಿಯೇ ಇಲ್ಲ ಎಂದು ಸಿದ್ಧರಾಮಯ್ಯ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಿದರೆ. ಬಿಜೆಪಿಯದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತಾ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದಿದ್ದಾರೆ.
ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್‌ನವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕೇಂದ್ರದಲ್ಲೂ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುತ್ತಿದ್ದಾರೆ. ರಾಜ್ಯದಲ್ಲೂ ಕೂಡಾ ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಅವರ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೆಂಪಣ್ಣ ಅವರಿಗೆ ನೇರವಾಗಿ ಹೇಳುತ್ತೇನೆ. ನೀವು ಹಿರಿಯರು, ನಿಮ್ಮ ಬಗ್ಗೆ ನನಗೆ ಗೌರವ ಇದೆ. ನೀವು ಏಕೆ ಕಾಂಗ್ರೆಸ್ ಕೈಗೊಂಬೆ ಆಗಿದ್ದೀರಾ…?
ಪ್ರತಿಯೊಬ್ಬ ಮಂತ್ರಿ ಒಂದು ಕೇಸಲ್ಲಿ 40% ಪಡೆದಿದ್ದಾರೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಿ. ನೂರಾರು ದಾಖಲೆ ಇವೆ ಎಂದರೆ ಸಾಲದು, ಆ ದಾಖಲೆಗಳ ಬಿಡುಗಡೆ ಮಾಡಿ. ಒಂದು ದಾಖಲೆ ಬಿಡುಗಡೆ ಮಾಡ್ದೆ, ಕಾಂಗ್ರೆಸ್ ಏಜೆಂಟ್ ರೀತಿ ಮಾತನಾಡಿದರೆ ಜನ ಹೇಗೆ ನಂಬುತ್ತಾರೆ. ಸಿಎಂ, ಪಿಎಂ ಅವರಿಗೆ ಪತ್ರ ಬರೆದೆ ಎಂದು ಹೇಳಿದ ಮಾತ್ರಕ್ಕೆ ಅಥವಾ ಪತ್ರ ಬರೆದ ತಕ್ಷಣ ಸಮಸ್ಯೆ ಬಗೆಹರಿಯೋದಿಲ್ಲ. ಪತ್ರ ಬರೆದಿರಬಹುದು, ಎಲ್ಲಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ…? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವ ವಿಚಾರದ ಬಗ್ಗೆ ನಿನ್ನೆ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಅವರ ಅವಧಿಯಲ್ಲಿ ಏನೇನು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಹೇಳುತ್ತೇವೆ. ಜೊತೆಗೆ ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸದ ಬಗ್ಗೆಯೂ ಹೇಳುತ್ತೇವೆ. ಕೆಂಪಣ್ಣರಂತಹ ಯಜಮಾನರನ್ನು ದಯವಿಟ್ಟು ಬಿಟ್ಟುಬಿಡಿ. ಸುಮ್ಮನೆ ಅವರಿಗೆ ಕೆಟ್ಡ ಹೆಸರು ತರಬೇಡಿ. ಅವರನ್ನು ಮುಂದೆ ಬಿಟ್ಟು ಆರೋಪ ಮಾಡಿದರೆ ನಿಮ್ಮ ಮಾತನ್ನು ಯಾರು ನಂಬುತ್ತಾರೆ. ಒಂದೇ ಒಂದು ದಾಖಲೆ ಬಿಡುಗಡೆ ಮಾಡಲು ತಯಾರಿಲ್ಲ ಬರಿ ಪುಕ್ಸಟೆ ಮಾತು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜನೋತ್ಸವದ ಬಗ್ಗೆ ಹಾಗೂ ಏನೇನು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇವೆ ಅಂತಾ ತೋರಿಸುತ್ತೇವೆ. ಕಾಂಗ್ರೆಸ್ ನವರ ಮಾತನ್ನು ಜನ ನಂಬುವುದಿಲ್ಲ. ಆದರೂ ಭಂಡತನದಿಂದ ನಮ್ಮ ಮೇಲೆ ಆಪಾದನೆ ಮಾಡುತ್ತಾರೆ. ಡಿಕೆಶಿ, ಸಿದ್ದರಾಮಯ್ಯ ಆರೋಪಗಳನ್ನು ಜನ ನಂಬುವುದಿಲ್ಲ ಎಂದರು.
ದಿನ ಸತ್ಯ ಹರಿಶ್ಚಂದ್ರನ ರೀತಿ ಮಾತನಾಡುವ, ಇದು ಭ್ರಷ್ಟಾಚಾರ ಸರ್ಕಾರ, 40% ಸರ್ಕಾರ ಎಂದು ಹೇಳುವ ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಯಾಕೆ ಸುಮ್ಮನೆ ಹೋಗಿದ್ದರಾ… ಬೇಲ್ ಮೇಲೆ ಯಾಕೆ ಇದ್ದಾರೆ…? ತಿಹಾರ್ ಜೈಲಿಗೆ ಸುಮ್ಮನೆ ಕಳುಹಿಸುತ್ತಾರಾ…? ಅವರ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಹಣ ಸಿಕ್ಕಿದ್ದು ಸತ್ಯ ತಾನೇ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಸರ್ಕಾರ ಅಂತಾರಲ್ಲ ಜನ ಇವರ ಮಾತನ್ನು ನಂಬುತ್ತಾರಾ..? ಎಂದು ಕಟುಕಿಯಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post