ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕ್ಷೇತ್ರಕ್ಕೆ ಶಕ್ತಿಯಂತಿದ್ದ ವೇ.ಬ್ರಂ. ವಿದ್ವಾನ್ ಅ.ಪ. ರಾಮಭಟ್ಟರು(73) ಇಂದು ರಾತ್ರಿ ವಿಧಿವಶರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ 2-3 ದಿನಗಳ ಹಿಂದೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ 11.30ರ ವೇಳೆಗೆ ಪರಮಾತ್ಮ ಪರಮಾತ್ಮನ ಸಾಯುಜ್ಯವನ್ನು ಸೇರಿದ್ದಾರೆ.
ಬಸವನಗುಡಿಯ 5ನೆಯ ತಿರುವಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತ ಶ್ರೀಯುತ ಅಂತ್ಯ ಸಂಸ್ಕಾರದ ಕುರಿತಾಗಿ ಕುಟುಂಬಸ್ಥರು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.
ರಾಮಭಟ್ಟರ ನಿಧನದ ಸುದ್ಧಿ ತಿಳಿದು ಅವರ ಮೂಲ ಸ್ಥಳ ಅಂಬು ತೀರ್ಥದಲ್ಲಿ ಸೂತಕದ ಛಾಯೆ ಆವರಿಸಿದೆ.
ರವೀಂದ್ರ ನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ರಾಮಭಟ್ಟರು, ಶಿವಮೊಗ್ಗ ಭಜನಾ ಪರಿಷತ್ ಅಧ್ಯಕ್ಷರೂ ಸಹ ಆಗಿದ್ದರು. ಧರ್ಮಶಾಸ್ತ್ರ, ವೇದಾಂಗ ಪಾರಂಗತರಾಗಿದ್ದ ಇವರು ಜಿಲ್ಲೆಯ ಧಾರ್ಮಿಕ ಕ್ಷೇತ್ರದ ಧೀಮಂತ ವ್ಯಕ್ತಿಯಾಗಿದ್ದರು. ಸದಾ ಹಸನ್ಮುಖಿಯಾಗಿ ಪ್ರತಿಯೊಬ್ಬರನ್ನೂ ಸಹ ಮಾತನಾಡಿಸುತ್ತಿದ್ದ ಇವರ ಸರಳ ವ್ಯಕ್ತಿತ್ವ ಮಾದರಿಯಾದುದು.
ಯಾವುದೇ ವಿಚಾರದಲ್ಲೂ ಆಸೆ ಪಡದೇ ಅತ್ಯಂತ ಸರಳವಾಗಿ ಜೀವನ ಸಾಗಿಸುತ್ತಿದ್ದ ಇವರು ತಮ್ಮಿಡೀ ಜೀವಮಾನವನ್ನು ದೇವರ ಕಾರ್ಯ, ಪೂಜಾ ಕೈಂಕರ್ಯ, ಧರ್ಮ ಪ್ರಚಾರ, ಲೋಕಾ ಕಲ್ಯಾಣಾರ್ಥವಾಗಿ ಪೂಜೆ, ಹೋಮ, ಹವನ, ಜಪತಪಗಳನ್ನು ನಡೆಸುವಲ್ಲಿಯೇ ಸವೆಸಿದ್ದಾರೆ. ಇಡಿಯ ಸಮಾಜಕ್ಕೇ ಮಾದರಿಯಾದ ವ್ಯಕ್ತಿತ್ವದ ಮೂಲಕ ಮುಂದಿನ ಪೀಳಿಗೆಗೆ ಸನ್ಮಾರ್ಗದ ಹಾದಿ ತೋರಿದ್ದಾರೆ ರಾಮಭಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post