ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೆಂಡತಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಗಂಡ ಮತ್ತು ಆತನ ಗೆಳೆಯರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಮತ್ತು ತಲಾ ರೂ.1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆ ಹಿನ್ನೆಲೆ
ಶಿವಮೊಗ್ಗ ನಗರದ ವೆಂಕಟೇಶ್ವರ ನಗರದ ನಿವಾಸಿ ಕೃಷ್ಣಮೂರ್ತಿರವರ ಮಗ ಕಾರ್ತಿಕ್ ಕೆ.(28) ಶ್ರೀರಾಮನಗರದ ವಾಸಿ ಆರ್. ಪೊನ್ನುಸ್ವಾಮಿ ಅವರ ಸಾಕುಮಗಳು ರೇವತಿ(21) ಅವರನ್ನು 2017ರಲ್ಲಿ ವಿವಾಹವಾಗಿದ್ದರು.
ಪತ್ನಿ ರೇವತಿ ಕಾರ್ತಿಕನೊಂದಿಗೆ ಜಗಳ ಆಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ತನ್ನ ಪತ್ನಿ ರೇವತಿಯು ತನ್ನ ಮನೆಯ ಎದುರು ಇರುವ ವಿಜಯ ಎಂಬುನನ್ನು ಪ್ರೀತಿಸುತ್ತಿದ್ದರಿಂದ ಮನೆ ಬಿಟ್ಟು ಹೋಗಿರುತ್ತಾಳೆಂದು ಆರೋಪಿ ಕಾರ್ತಿಕ ತನ್ನ ಗೆಳೆಯರಾದ 2ನೇ ಆರೋಪಿ ಭರತ್ ವಿ, 23(ವರ್ಷ), 3ನೆಯ ಆರೋಪಿ ಸತೀಶ್(26) ಮತ್ತು 4ನೇ ಆರೋಪಿ ಸಂದೀಪ(21) ಅವರೊಂದಿಗೆ ಸೇರಿಕೊಂಡು ತನ್ನ ಪತ್ನಿ ಮತ್ತು ವಿಜಯನನ್ನು ವಡ್ಡಿನಕೊಪ್ಪಕ್ಕೆ ಕರೆಸಿಕೊಂಡು ಮಚ್ಚು, ಲಾಂಗು ಮತ್ತು ಕಲ್ಲಿನಿಂದ ಕೊಲೆ ಮಾಡಿದ್ದರು.
Also read: ಗಮನಿಸಿ! ಆ. 11, 12 ರಂದು ಆಯನೂರು ಗ್ರಾಮದ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಪ್ರಕರಣದ ವಿಚಾರಣೆ ನಡೆಸಿದ ತುಂಗಾನಗರ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖಾಧಿಕಾರಿ ಮಹಾಂತೇಶ್ ಬಿ. ಹೊಳಿ ಅವರು ತನಿಖೆ ಪೂರೈಸಿ ಆರೋಪಿಗಳಾದ ಕಾರ್ತಿಕ್, ಭರತ್, ಸತೀಶ್, ಸಂದೀಪ್ ಇವರುಗಳ ವಿರುದ್ದ ಐಪಿಸಿ ಕಲಂ 302, 120(ಬಿ)ಸಹವಾಚಕ 34 ರಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಶಿವಮೊಗ್ಗದ ಮಾನ್ಯ 3ನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿ ವಿಚಾರಣೆ ನಡೆದು, ಆರೋಪಗಳು ದೃಢಪಟ್ಟಿರುವುದರಿಂದ ಆರೋಪಿತರಿಗೆ 1ನೆಯ ಮತ್ತು 3ನೆಯ ಅಪರ ಜಿಲ್ಲಾ ಮತ್ತು ನ್ಯಾಯಾಧೀಶರಾದ ಕೆ.ಎಸ್. ಮಾನು ರವರು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ 3ನೆಯ ಆರೋಪಿ ಸತೀಶ್ ಬಿನ್ ಗೋವಿಂದರಾಜ ತಲೆಮರೆಸಿಕೊಂಡಿರುವುದರಿಂದ ಈತನನ್ನು ಪ್ರಕರಣದಿಂದ ಪ್ರತ್ಯೇಕಿಸಿ, ಪ್ರತ್ಯೇಕ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು ಈತನ ಮೇಲಿನ ವಿಚಾರಣೆ ಬಾಕಿ ಇರುತ್ತದೆ.
ಸರ್ಕಾರಿ ಅಭಿಯೋಜಕರಾದ ಜೆ. ಶಾಂತರಾಜ್ ಸರ್ಕಾರದ ಪರವಾಗಿ ಸಾಕ್ಷಿಗಳ ವಿಚಾರಣೆ ಮಾಡಿ ವಾದವನ್ನು ಮಂಡಿಸಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















