ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಕಲಿ ಕಾರ್ಮಿಕ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ #Minister Santhosh Lad ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಕಲಿ ಕಾರ್ಡ್‍ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಡ್‍ಗಳನ್ನು ಕೊಡುವ ಏಜೆನ್ಸಿಗಳೇ ಹುಟ್ಟಿಕೊಂಡಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಕಲಿ ಕಾರ್ಡ್‍ಗಳನ್ನು ಗುರುತಿಸಲು ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರ ಕಾರ್ಡ್‍ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ದೂರುಗಳು ಕೂಡ ಬಂದಿವೆ ಎಂದರು.

Also read: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಪ್ರಜಾಪ್ರಭುತ್ವ ವಿರೋಧಿ ನೀತಿ
ಬಾಲ ಕಾರ್ಮಿಕರನ್ನು ಗುರುತಿಸುವುದಷ್ಟೇ ಅಲ್ಲ, ಅವರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಬೇರೆ ರಾಜ್ಯಗಳಿಂದ ಬಂದಿರುತ್ತಾರೆ. ಅದನ್ನೂ ನೋಡಬೇಕಾಗುತ್ತದೆ. ಶಾಲೆ, ಬಿಡುವವರ ಸಂಖ್ಯೆ ಹೆಚ್ಚಾಗಲು ಬಾಲ ಕಾರ್ಮಿಕರಾಗುತ್ತಾರೆ ಎಂಬ ಆರೋಪವೂ ಇದೆ. ಆದರೆ ಇದೊಂದೇ ಕಾರಣವಲ್ಲ, ಇದಕ್ಕೆ ಬಡತನವೂ ಕಾರಣವಾಗಿರಬಹುದು. ಮಧ್ಯಾಹ್ನದ ಬಿಸಿಯೂಟದಿಂದ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ನಾನು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಕಾರ್ಮಿಕರ ಕಲ್ಯಾಣ ಮಂಡಳಿ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಬಾಲ ಕಾರ್ಮಿಕರು, ಕಟ್ಟಡ ಕಾರ್ಮಿಕರು ಈ ಎಲ್ಲಾ ಕಾರ್ಮಿಕರ ಕಲ್ಯಾಣಕ್ಕಾಗಿ ಬೇರೆ ದೇಶಗಳಿಂದ ಬಂದ ಕಾರ್ಮಿಕರನ್ನು ಗುರುತಿಸಲು ಮತ್ತು ಕೆಲಸ ನೀಡಲು ಹೊಸ ಕಾನೂನಿನ ಅಗತ್ಯವಿದೆ ಎಂದರು.

ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 2020ರಲ್ಲಿ ಬಿಜೆಪಿ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಹೆಚ್ಚಿಸಿತ್ತು. ಈಗ ನಾವು ಅಷ್ಟೇ ಹೆಚ್ಚಿಸಿದ್ದೇವೆ. ಇದು ಹೇಗೆ ಹೆಚ್ಚಳ ಆಗುತ್ತದೆ. ಅವರೂ ಹೆಚ್ಚಳ ಮಾಡಿದರೆ ನ್ಯಾಯ. ನಾವು ಹೆಚ್ಚಳ ಮಾಡಿದರೆ ಅನ್ಯಾಯವೇ? ಶಕ್ತಿ ಯೋಜನೆಗೂ ಬಸ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದರು.
ಬೇರೆ ಯಾವುದೇ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಬಸ್‍ಗಳಿವೆ. ಅಲ್ಲದೇ, ಬಸ್ ಪ್ರಯಾಣದರ ಏರಿಕೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯೂ ಕಾರಣವಾಗುತ್ತದೆ. ಕೇಂದ್ರ ಸರ್ಕಾರ ಮನಸು ಮಾಡಿದರೆ ಲೀಟರ್ ಗೆ 40 gರೂ.ಗೆ ನೀಡಬಹುದಲ್ಲವೇ? ಏಕೆ ನೀಡುತ್ತಿಲ್ಲ. ಯಾವುದೇ ದರ ಏರಿಕೆಗೆ ಕೇಂದ್ರವೇ ಕಾರಣ ಎಂದರು.
ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವೇ ಆಗಿದೆ. ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಯಾಗಿ ಆಳಿದ ಗುಜರಾತ್ ರಾಜ್ಯದ ಕತೆ ಇವತ್ತು ಏನಾಗಿದೆ. ಜಿಡಿಪಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿದೆ. ಇಂದು ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಡಾಲರ್ ಬೆಲೆ ಏರಿದೆ. ಭಾರತದ ಸಾಲ ಸ್ವಾತಂತ್ರ್ಯ ಬಂದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೋದಿ ಸರ್ಕಾರದಲ್ಲಿ ಆಗಿದೆ. 55 ಲಕ್ಷ ಕೋಟಿ ರೂ. ಇದ್ದ ಸಾಲ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 200 ಲಕ್ಷ ಕೋಟಿ ರೂ. ದಾಟಿದೆ. ಬರೀ ಮಾತನಾಡುವುದಲ್ಲ, ಬಿಜೆಪಿಯವರು ಅಂಕಿ ಅಂಶಗಳ ಜೊತೆ ನನ್ನೊಂದಿಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಹೆಸರು ಇದೆ ಎಂದು ಹೇಳುತ್ತಾರೆ. ಡೆತ್ ನೋಟ್ ನಲ್ಲಿ ಅವರ ಹೆಸರು ಎಲ್ಲಿದೆ? ಯರಾದರೂ ನೋಡಿದ್ದಾರೆಯೇ? ಈಗಾಗಲೇ ಡೆತ್ ನೋಟ್ ನಲ್ಲಿ ಇರುವವರ ಹೆಸರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಕರ ಸಂಕ್ರಾಂತಿಗೆ ಮುಖ್ಯಮಂತ್ರಿ ಸಿದ್ಧರಾಮ್ಯ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹೇಳಲಿ ಬಿಡಿ. ನಾನು ಕೂಡ ಮಕರ ಸಂಕ್ರಾಂತಿಗೆ ಮೋದಿ ಬದಲಾವಣೆ ಆಗುತ್ತಾರೆ ಎಂದು ಹೇಳುವೆ. ಇಂತಹ ಹೇಳಿಕೆಗಳಿಗೆಲ್ಲಾ ಅರ್ಥವಿರುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ಚಂದ್ರಭೂಪ್ಲ, ಎಸ್.ಟಿ. ಚಂದ್ರಶೇಖರ್, ಇಸ್ಮಾಯಿಲ್ ಖಾನ್, ಹೆಚ್.ಸಿ. ಯೋಗೀಶ್, ಕಲೀಂ ಪಾಷ, ಶಿವಕುಮಾರ್, ಕಲಗೋಡು ರತ್ನಾಕರ್, ಎಂ.ಪಿ. ದಿನೇಶ್ ಪಾಟೀಲ್, ಪಿ.ಎಸ್. ಗಿರೀಶ್ ರಾವ್, ಮಂಜುನಾಥಬಾಬು, ಶಿವಣ್ಣ, ವೈ.ಬಿ. ಚಂದ್ರಕಾಂತ್, ಕಾಶಿ ವಿಶ್ವನಾಥ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post