ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಣಮಟ್ಟ ಎನ್ನುವುದು ಖಾಸಗೀಯವರಿಗೂ ಕಡ್ಡಾಯವಾಗಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ (ಶಿಮೂಲ್) #Shimul ಹೆಚ್.ಎನ್. ವಿದ್ಯಾಧರ್ ಹೇಳಿದರು.
ಅವರು ಇಂದು ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಶಿಮೂಲ್, ಜಿಲ್ಲಾ ಆಹಾರ ಸುರಕ್ಷತಾ ಮತ್ತು ತರಬೇತಿ ಪ್ರಮಾಣ ಪತ್ರ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಆಹಾರ ಸುರಕ್ಷತಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯವರು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ವಿಷಯ. ಇಲ್ಲಿ ಮಾಹಿತಿ ಪಡೆದ ಕಾರ್ಯದರ್ಶಿಗಳು ತಮ್ಮ ತಮ್ಮ ಕೇಂದ್ರಗಳಲ್ಲಿ ಹಾಲಿನ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಂದಿನಿ ಹಾಲು ಅತ್ಯಂತ ಶುದ್ಧವಾಗಿದ್ದು, ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟವನ್ನು ಕಾಯ್ದೆಕೊಂಡಿದೆ. ಸ್ವಚ್ಛತೆಗೆ ಕೊಟ್ಟಿಗೆಯಿಂದಲೇ ಆದ್ಯತೆ ನೀಡಲು ನಮ್ಮ ಸಂಸ್ಥೆ ಕ್ರಮಕೈಗೊಂಡಿದೆ. ದೇಶದಲ್ಲಿಯೇ ನಂದಿನಿ ಹಾಲಿಗೆ ಅತ್ಯಂತ ಹೆಸರಾಗಿದ್ದು, ಶಿಮೂಲ್ ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತುಬದ್ಧತೆಗೆ, ಸುರಕ್ಷತೆಗೆ ಗಮನಹರಿಸುತ್ತಿದೆ ಎಂದರು.
ಖಾಸಗಿ ಹಾಲು ಸಂಸ್ಥೆಗಳ ಪೈಪೋಟಿ ಇದೀಗ ಹೆಚ್ಚಾಗುತ್ತಿದೆ. ಆಹಾರ ಸುರಕ್ಷತಾ ಇಲಾಖೆಯವರು ಅಣಬೆಯಂತೆ ತಲೆ ಎತ್ತುತ್ತಿರುವ ಇಂತಹ ಉತ್ಪನ್ನಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಶಿಮೂಲ್‌ಗೆ ಹೇಗೆ ಪ್ರಮಾಣಪತ್ರ ನೀಡುತ್ತೀರೋ ಹಾಗೆಯೇ ಖಾಸಗಿಯವರಿಗೂ ಗುಣಮಟ್ಟ ನೋಡಿ ಪ್ರಮಾಣಪತ್ರ ಕೊಡಬೇಕು. ಆದರೆ ಹಲವು ಸಂದರ್ಭದಲ್ಲಿ ಸುರಕ್ಷಿತವಲ್ಲದ ಖಾಸಗಿ ಹಾಲಿನ ಸಂಸ್ಥೆಗಳು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್ ಮಾತನಾಡಿ, ವಿಶ್ವದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ ಭಾರತವಾಗಿದೆ. ಇದು ಶೇ.24ರಷ್ಟು ಹಾಲನ್ನು ಉತ್ಪಾದನೆ ಮಾಡುತ್ತದೆ. ಅದರಲ್ಲಿಯೂ ಕರ್ನಾಟಕ ರಾಜ್ಯದಲ್ಲಿ ನಂ.೧ರ ಸ್ಥಾನದಲ್ಲಿ ಶಿಮೂಲ್ ಇದೆ. ಶಿಮೂಲ್‌ನಿಂದ ಅತ್ಯಂತ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ. ನಿಖರವಾದ ಪರೀಕ್ಷೆಯ ಮೂಲಕ ಹೊಸ ತಾಂತ್ರಿಕತೆಯನ್ನು ಅಳವಡಿಸುವ ಮೂಲಕ ನಾವು ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ ಎಂದರು.
ಒಕ್ಕೂಟದ ನಿರ್ದೇಶಕ ಹೆಚ್.ಬಿ. ದಿನೇಶ್ ಮಾತನಾಡಿ, ಹಾಲಿನ ಸಂಸ್ಥೆಗಳಿಗೆ ಸ್ವಚ್ಛತೆ ಅನಿವಾರ್‍ಯ. ಆದರೆ ನಮ್ಮ ರೈತರಿಗೆ ರಕ್ತಗತವಾಗಿಯೇ ಸ್ವಚ್ಛತೆಯ ಬಗ್ಗೆ ಅರಿವು ಇದೆ. ಇಲ್ಲಿ ಶುದ್ಧವಾದ ಹಾಲನ್ನು ಸಂಗ್ರಹಿಸಲಾಗುತ್ತದೆ. ಅದರಲ್ಲೂ ನಂದಿನಿ ಹಾಲು ಎಂಬುದು `ನಮ್ಮ ನಂದಿನಿ-ನಮ್ಮ ಹೆಮ್ಮೆ ಎಂಬಂತಾಗಿದೆ ಎಂದರು.
ಆಹಾರ ಸುರಕ್ಷತಾ ಮತ್ತು ತರಬೇತಿ ಪ್ರಮಾಣ ಕೇಂದ್ರದ ಅಧಿಕಾರಿ ಬಿ.ಟಿ. ಹನುಮಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಹಾಲಿನ ಸಂಸ್ಥೆಗಳು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂಬುದು ನಮ್ಮ ಇಲಾಖೆಯ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿಯೇ ಗುಣಮಟ್ಟ ಕಾಪಾಡುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಶಿವಮೊಗ್ಗ ಒಕ್ಕೂಟ ವ್ಯಾಪ್ತಿಯಲ್ಲಿ ಸುಮಾರು ೫೭೪ ಹಾಲು ಉತ್ಪಾದಕರ ಸಂಘಗಳಿವೆ. ಆ ಸಂಘದ ಕಾರ್ಯದರ್ಶಿಗಳಿಗೆ ಈಗಾಗಲೇ ತರಬೇತಿಯನ್ನು ನೀಡುತ್ತಾ ಬಂದಿದ್ದೇವೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಈ ಸುರಕ್ಷತಾ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಪ್ರಮಾಣಪತ್ರ ಪಡೆಯುವುದು ಮತ್ತು ನೀಡುವುದು ಕಡ್ಡಾಯವಾಗಿದ್ದು, ಯಾರೇ ಖಾಸಗೀಯವರಾಗಲಿ ಗುಣಮಟ್ಟ ಇಲ್ಲದಿದ್ದರೆ ಅಂತಹವರಿಗೆ ಪ್ರಮಾಣಪತ್ರ ನೀಡುವುದಿಲ್ಲ ಎಂದರು.
ಆಹಾರ ಸುರಕ್ಷತಾ ತರಬೇತಿ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪ್ರಾತ್ಯಕ್ಷತೆಯ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸ್ವಚ್ಛತೆ, ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಮೂಲ್ ವಿಸ್ತರಣಾಧಿಕಾರಿಗಳಾದ ರಚನಾ ಎನ್., ಕುಷ್ಬು, ಹರ್ಷಿತಾ, ಮಹಾಲಕ್ಷ್ಮೀ ಸಿ.ಎಂ., ಪ್ರೀತಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















