ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಡಿಕೆ ಬೆಳೆಗಾರರ #Arecanut Farmers ಹಿತಕ್ಕಾಗಿ ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರ ನಿಯೋಗ ಕೇಂದ್ರದ ಕೃಷಿ ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಿದ್ದು, ಹಲವು ಭರವಸೆಗಳನ್ನು ಅವರು ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಲಾಗಿದೆ. ಅವರು ರೈತರ ನೆರವಿಗೆ ಬರಲು ಈಗಾಗಲೇ ಒಪ್ಪಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ನೀಡಿದ್ದೇವೆ ಎಂದರು.
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಚರ್ಚೆ ನಡೆಯುತ್ತಿದೆ. ಇದು ಕೊನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರಿಗೆ ಮನವಿ ಮಾಡಿದ್ದು, ಆರು ತಿಂಗಳೊಳಗೆ ಸಂಶೋಧನೆ ಮೂಲಕ ಈ ಬಗ್ಗೆ ನಿಖರ ಮಾಹಿತಿ ಹೊರಬರಬೇಕೆನ್ನುವುದನ್ನು ಅಧಿಕಾರಿಗಳಿಗೆ ಸಚಿವರು ತಿಳಿಸಿದ್ದಾರೆ ಎಂದರು.
ಅಡಿಕೆ ಕ್ಯಾನ್ಸರ್ ಕಾರಕ ಆಗಲು ಸಾಧ್ಯವೇ ಇಲ್ಲ. ಆದರೆ, ಅದಕ್ಕೆ ರಾಸಾಯನಿಕ ಮಿಶ್ರಣ ಮಾಡಿದರೆ ಮಾತ್ರ ಕ್ಯಾನ್ಸರ್ ಬರುತ್ತದೆ ಎಂಬುದನ್ನು ನಮ್ಮ ನಿಯೋಗ ತಿಳಿಸಿದೆ. ಹಾಗೆಯೇ ಅಡಿಕೆಗೆ ಹಳದಿ ರೋಗ ಬಾಧೆ ಕಾಡುತ್ತಿದ್ದು, ಇದನ್ನು ತಡೆಯುವ ಬಗ್ಗೆ ಸಂಶೋಧನೆ ಮತ್ತು ಔಷಧೋಪಚಾರದ ಬಗ್ಗೆ, ರೈತರಿಗೆ ನಷ್ಟವಾದರೆ ಪರಿಹಾರದ ಬಗ್ಗೆಯೂ ಚರ್ಚಿಸಲಾಗಿದೆ. ಅಡಿಕೆ ಬೇಯಿಸುವಾಗ ಶೇಕಡ 7ರಷ್ಟು ತೇವಾಶ ಇರಬೇಕೆಂಬ ನಿಯಮವಿದೆ. ಆದರೆ ರೈತರಿಗೆ ಇದು ಸಾಧ್ಯವಿಲ್ಲ. ಈ ಪ್ರಮಾಣವನ್ನು ಶೇ. 11ರಿಂದ 12ಕ್ಕೆ ಹೆಚ್ಚಿಸುವಂತೆಯೂ ಕೋರಿಕೊಳ್ಳಲಾಗಿದೆ. ಹಾಗೆಯೇ ದೊಡ್ಡ ಅಡಿಕೆ ಮತ್ತು ಸಣ್ಣ ಅಡಿಕೆ ಎಂದು ವಿಭಾಗ ಮಾಡುವುದು ಸರಿಯಲ್ಲ. ಎಲ್ಲ ಅಡಿಕೆಯೂ ಒಂದೇ ಎಂದು ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ. ಹಾಗೆಯೇ ಬಹುಖ್ಯವಾಗಿ ಅಡಿಕೆಗೆ ಜಿ.ಎಸ್.ಟಿ. ಕಡಿಮೆ ಮಾಡಬೇಕು. ಮತ್ತು ಕಳ್ಳ ಸಾಗಾಣೆ ತಡೆಯಬೇಕು. ಹಾಗೂ ಅಡಿಕೆ ಹಾಳೆಯಿಂದ ಊಟ ಮಾಡಿದರೆ ಕ್ಯಾನ್ಸರ್ ಬರುತ್ತೆ ಎಂಬುದನ್ನು ತೆಗೆದು ರಫ್ತಿಗೆ ಅವಕಾಶ ಮಾಡಿಕೊಡಬೇಕೆಂದು ಕೂಡ ಒತ್ತಾಯಿಸಲಾಗಿದೆ ಎಂದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಿಗಂದೂರು ಸೇತುವೆ ಬಳಿ ಹಿನ್ನೀರಿನಲ್ಲಿ ವಾಟರ್ ಏರೋಡ್ರಂ ಮಾಡುವ ಪ್ರಸ್ತಾಪಕ್ಕೆ ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಚಟುವಟಿಕೆ ಶುರುವಾಗಲಿದೆ. ಇದರ ಜೊತೆಗೆ ಎಲ್ಲಾ ಪ್ರವಾಸಿಕೇಂದ್ರಗಳಲ್ಲಿಯೂ ಇದನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್‌ನವರ ಹುಚ್ಚಾಟಗಳು ಮುಂದುವರೆಯುತ್ತಲೇ ಇವೆ. ಡಿ.ಕೆ. ಶಿವಕುಮಾರ್ ಸದನದಲ್ಲಿ ಆರ್.ಎಸ್.ಎಸ್. ಗೀತೆ ಹಾಡಿದರು. ಆದರೆ ಮತ್ತೆ ಕ್ಷಮೆ ಕೇಳಿದರು. ಹೈಕಮಾಂಡ್ ಓಲೈಸಲು ಈ ನಿರ್ಧಾರ. ಈಗಾಗಲೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಡ ಕಳಚಿದೆ ಎಂದ ಅವರು ದಸರಾ ಉದ್ಘಾಟನೆಗೆ ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ಅವರನ್ನು ಕರೆದಿರುವುದು ಅಷ್ಟು ಸರಿಯಲ್ಲ. ಈಗಾಗಲೇ ಬಿಜೆಪಿ ನಾಯಕರು ಅದಕ್ಕೆ ಉತ್ತರ ಕೊಟ್ಟಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post