ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದ್ದು, ಇದು ಬಿಜೆಪಿ ಕಾರ್ಯಕ್ರಮವಾಗದೆ ಜಿಲ್ಲಾಡಳಿತದ ಕಾರ್ಯಕ್ರಮವಾಗಬೇಕು. ಪಕ್ಷಾತೀತವಾಗಿ ನಡೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಆಗ್ರಹಿಸಿದ್ದಾರೆ.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಸ್ಥಾಪನೆಯಾಗಿರುವುದು ಮತ್ತು ಅದರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಷಯವೇ. ಆದರೆ ಈ ಕಾರ್ಯಕ್ರಮವನ್ನು ಬಿಜೆಪಿಯ ನಾಯಕರು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಈಗಾಗಲೇ ಬೂತ್ ಮಟ್ಟದಿಂದ ಜನರನ್ನು ಮತದಾನಕ್ಕೆ ಕರೆತರುವಂತೆ ಕರೆತರುತ್ತಿದ್ದಾರೆ. ಜಿಲ್ಲೆಯ ತುಂಬಾ ಮೂರು ಸಾವಿರ ಬಸ್‌ಗಳನ್ನು ಜನರನ್ನು ಕರೆತರಲೆಂದೇ ಬಿಟ್ಟಿದ್ದಾರೆ. ಜಿಲ್ಲಾಡಳಿತದಿಂದ ಆಗಬೇಕಾದ ಕಾರ್ಯಕ್ರಮ ಬಿಜೆಪಿ ಕಾರ್ಯಕರ್ತರಿಂದ ಆಗುತ್ತಿರುವುದು ಖಂಡನೀಯ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ಹೇಗಿತ್ತು ಎಂಬುದನ್ನು ಬಿಜೆಪಿಯವರು ಮರೆತಂತಿದೆ. ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ದೊಡ್ಡದೊಡ್ಡ ನೀರಾವರಿ ಯೋಜನೆಗಳು, ಸಂಪರ್ಕ ಕ್ರಾಂತಿ ಹೀಗೆ ಹಲವು ಕ್ರಾಂತಿಗಳೇ ಕಾಂಗ್ರೆಸ್ ಸರ್ಕಾರದಲ್ಲಿನಡೆದಿವೆ. ಕಾಂಗ್ರೆಸ್ ಹಾಕಿದ ಅಭಿವೃದ್ಧಿ ಎಂಬ ಭದ್ರ ತಳಪಾಯದಲ್ಲಿ ಇವರು ಕಳಪೆ ಮಟ್ಟದ ಕಟ್ಟಡ ಕಟ್ಟಲು ಹೊರಟಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಕೀರ್ತಿ ಕಾಂಗ್ರೆಸ್‌ನದ್ದು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ ಅಪಕೀರ್ತಿ ಬಿಜೆಪಿಯವರದ್ದು. ಕಾರ್ಖಾನೆಗಳು ಮುಚ್ಚಿದವು. ಈಗ ಸರ್ಕಾರದ ಅಂಗ ಎಂದು ಹೇಳಿಕೊಳ್ಳುವ ಯಾವ ಸಂಸ್ಥೆಯೂ ಇಲ್ಲ. ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲು ಹೊರಟಿದೆ. ಈಗ ಭದ್ರಾವತಿಯ ವಿಐಎಸ್‌ಎಲ್ ಕೂಡ ಸೇರಿಕೊಂಡಿದೆ. ಸಂಸದರು, ಮುಖ್ಯಮಂತ್ರಿಗಳು ಪ್ರಧಾನಿಗೆ ಮನವಿ ಮಾಡಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಲು ಬಿಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಇಕ್ಕೇರಿ ರಮೇಶ್, ಎ.ಬಿ. ಮಾರ್ಟಿಸ್, ಆನಂದರಾವ್ ಇದ್ದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟಕವಿ ಕುವೆಂಪು ಹೆಸರು ಒಕ್ಕಲಿಗ ಮುಖಂಡರ ಸ್ವಾಗತ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟಕವಿ ಕುವೆಂಪು ಅವರ ಹೆಸರಿಡುವುದನ್ನು ಒಕ್ಕಲಿಗ ಮುಖಂಡರು ಸ್ವಾಗತಿಸಿದ್ದಾರೆ. ಮತ್ತು ಈ ಹೆಸರೇ ಅಂತಿಮವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಸಮಾಜದ ಮುಖಂಡ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಹೆಸರಿಡುವುದನ್ನು ನಾವು ಸ್ವಾಗತಿಸುತ್ತೇವೆ. ಈ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಯಡಿಯೂರಪ್ಪನವರು ತಮ್ಮ ಹೆಸರು ಬೇಡ. ಕುವೆಂಪು ಹೆಸರಿಡಿ ಎಂದು ಹೇಳಿರುವುದು ಅವರ ದೊಡ್ಡತನವಾಗಿದೆ. ಅದಕ್ಕಾಗಿ ಅಭಿನಂದನೆಗಳು ಎಂದರು.

ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ. ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಷಯವೇ ಆದರೆ ಇದರ ಹಿಂದೆ ವಿಮಾನ ನಿಲ್ದಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ರೈತರನ್ನು ಮರೆಯಬಾರದು. ರೈತರು ಸುಮಾರು ೯೦೦ ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಇದರು ಬಗರ್‌ಹುಕುಂ ಸಾಗುವಳಿ ಅಥವಾ ಪಹಣಿ ಇರುವ ಜಮೀನೇ ಆಗಿರಬಹುದು. ಅವರಿಗೆ ಪರಿಹಾರ ಕೊಟ್ಟಿದ್ದಾರೆ ನಿಜ. ಆದರೆ ಸರ್ಕಾರದ ತೀರ್ಮಾನದಂತೆ ಅವರಿಗೆ ಪುನರ್ವಸತಿ ನೀಡಬೇಕು. ಯಾವ ಸಬೂಬು ಹೇಳದೆ, ವಿಳಂಬ ಮಾಡದೆ ಅವರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಪಿ. ನಾಗರಾಜ್, ಶ್ರೀಕಾಂತ್, ಆಸಿತ್, ವಿಜಯಕುಮಾರ್, ಭಾರತೀ ರಾಮಕೃಷ್ಣ, ಸುಮಿತ್ರಾ ಕೇಶವಮೂರ್ತಿ ಮುಂತಾದವರಿದ್ದರು.

ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪುರವರ ಹೆಸರನ್ನು ನಾಮಕರಣ ಮಾಡಲು ಕಾರಣರಾದ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಅಭಿನಂದಿಸಿದೆ.
ಕುವೆಂಪು ರವರು ಡಿ.ಲಿಟ್ ಪದವಿ ಪಡೆದಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಗಳಾಗಿದ್ದು, ಪಂಪ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂತಹ ಹಲವಾರು ಗೌರವಗಳನ್ನು ಪಡೆದ ಕುವೆಂಪು ರವರ ಹೆಸರನ್ನು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಮೊದಲು ಬಿ.ಎಸ್.ಯಡಿಯೂರಪ್ಪನವರು ನಿರ್ಧರಿಸಿ ಅದರಂತೆ ಬೊಮ್ಮಾಯಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಐತಿಹಾಸಿಕ ಕ್ರಮವಾಗಿದೆ ಎಂದು ಟ್ರಸ್ಟ್ ಅಭಿನಂದನೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಮುಖಂಡರಾದ ಕಲ್ಲೂರು ಮೇಘರಾಜ್, ಹಾಗೂ ಪ್ರಮುಖರಾದ ಎಸ್.ವಿ.ರಾಜಮ್ಮ, ಡಾ.ನೇತ್ರಾವತಿ, ಆರ್.ಎ.ಚಾಬುಸಾಬ್, ಅಬ್ದುಲ್ ವಾಜೀದ್, ಎಲ್.ಆರ್.ಗೋಪಾಲಕೃಷ್ಣ, ಲಿಂಗರಾಜು, ಟಿ.ಆರ್.ಕೃಷ್ಣಪ್ಪ, ಸಿ.ಈರಪ್ಪ, ನಾಗರತ್ನ, ಸುರೇಶ್ ಕೋಟೆಕಾರ್, ಸಹನಾಮೂರ್ತಿ, ಶಂಕ್ರನಾಯ್ಕ್, ಶಕುಂತಲಾ, ನಳಿನಿ, ಜಯಮ್ಮ, ಬಸಮ್ಮ ಮೊದಲಾದವರಿದ್ದರು.

ಶಿವಮೊಗ್ಗ ತಾಲ್ಲೂಕಿನ ನಿದಿಗೆ ಹೋಬಳಿ, ಸೋಗಾನೆ ಗ್ರಾಮ ಸರ್ವೇ ನಂ.120ರಲ್ಲಿ ನಮ್ಮ ಹೆಸರಿನಲ್ಲಿ 24 ಎಕರೆ ಖಾತೆ ಮತ್ತು ಪಹಣಿಯಿದ್ದು, ನಡವಳಿಯಂತೆ ಪರಿಹಾರ ನೀಡುವವರೆಗೆ ಜಾಗ ಬಿಟ್ಟು ಕದಲಲ್ಲ ಎಂದು ಸೋಗಾನೆಯ ಬಿ.ಟಿ.ರವಿಕುಮಾರ್ ಮತ್ತು ಇತರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದು, ಶಾಸಕ ಕೆ.ಬಿ.ಅಶೋಕ್‌ನಾಯ್ಕ್ ಮತ್ತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭಾ ನಡವಳಿ ನಡೆಸಿದ್ದು, ಪ್ರತಿ ಎಕರೆಗೆ 40ಲಕ್ಷ ರೂ. ಮತ್ತು ಒಂದು ನಿವೇಶನವನ್ನು ಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದರು. ನಮ್ಮಗಳ 24 ಎಕರೆ ವಶಪಡಿಸಿಕೊಳ್ಳಲು ಮುಂದಾದಾಗ ನಾವು ತಕರಾರು ವ್ಯಕ್ತಪಡಿಸಿದ್ದೆವು. ಆಗ ಪರಿಹಾರದ ಭರವಸೆಯನ್ನು ನೀಡಿದ್ದರು.
ಉಪವಿಭಾಗಾಧಿಕಾರಿಗಳು ನಮಗೆ ಪತ್ರವನ್ನು ಬರೆದು ಪ್ರಕರಣ ಸಂಖ್ಯೆ ಎಲ್‌ಎನ್‌ಡಿಸಿಆರ್ 450/2016-17 ದಿ.26.04.2022ರಂದು ಸರ್ಕಾರದ ಕಾರ್ಯದರ್ಶಿಗಳಿಗೆ ಈ ಜಮೀನು ಸಂಬಂಧ ಹಣ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ ಮೇರೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಒಪ್ಪಿಗೆ ಸೂಚಿಸಿ 24 ಎಕರೆ ಜಮೀನಿಗೆ 10.54 ಕೋಟಿ ಬಿಡುಗಡೆ ಮಾಡಿರುತ್ತಾರೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಪರಿಹಾರದ ಮೊತ್ತ 9.60 ಕೋಟಿ ರೂ. ಹಣವನ್ನು ಸಹ ಚೆಕ್ ಮುಖಾಂತರ ಬಿಡುಗಡೆಮಾಡಿದ್ದು ಕಂಡು ಬಂದಿದ್ದು, ಇದುವರೆಗೆ ಸಂತ್ರಸ್ತ ರೈತರ ಕುಟುಂಬಗಳಿಗೆ ಸಿಕ್ಕಿಲ್ಲ ಮತ್ತು ನಿವೇಶನವನ್ನು ನೀಡಿರುವುದಿಲ್ಲ.
ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ನಾವು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಕೂಡಲೇ ಭೂ ಪರಿಹಾರವನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತ್ರಸ್ತ ರೈತ ಕುಟುಂಬಗಳೊಂದಿಗೆ ರೈತ ಮುಖಂಡರಾದ ಕೆ.ಟಿ.ಗಂಗಾಧರ್, ತಿ.ನಾ.ಶ್ರೀನಿವಾಸ್, ಬಿ.ಟಿ. ರವಿಕುಮಾರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post