ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಶಿಸ್ತು ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದಲ್ಲಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನುಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021 ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಅಡಿಪಾಯ ತುಂಬ ಸದೃಢವಾಗಿರಬೇಕು. ಅವರಿಗೆ ಉತ್ತಮ ಸಾಮಾಜಿಕ ವಾತಾವರಣ, ಶಿಕ್ಷಣ, ಆರೋಗ್ಯ ಒದಗಿಸಬೇಕು. ಆಗ ಇಡೀ ಕುಟುಂಬ, ಸಮಾಜದ ಬೆಳವಣಿಗೆ ಸಾಧ್ಯ. ಹಾಗೂ ವಿದ್ಯಾರ್ಥಿಗಳು ಕೂಡ ಶಿಸ್ತು ಮತ್ತು ಪರಿಶ್ರಮದಿಂದ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಮಾದಕ ವಸ್ತುಗಳ ಸೇವನೆ ಒಂದು ಫ್ಯಾಷನ್ ಎಂಬಂತೆ ಬಿಂಬಿಸಿ, ಮಾದಕ ದ್ರವ್ಯಗಳನ್ನು ತುಂಬಾ ಆಕರ್ಷಕ ಪ್ಯಾಕೆಟ್‍ಗಳನ್ನು ಮಾಡಿ ಮಕ್ಕಳನ್ನು, ಹದಿಹರೆಯದವರನ್ನು ಸೆಳೆಯಲಾಗುತ್ತಿದೆ. ಮಾದಕ ದ್ರವ್ಯದಂತಹ ಕೆಟ್ಟ ಅಭ್ಯಾಸಗಳೆಡೆ ಮಕ್ಕಳನ್ನು ಸೆಳೆಯಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದಲೇ ಸಿಗರೇಟ್ ಮತ್ತು ಮದ್ಯದ ಉತ್ಪನ್ನಗಳ ಮೇಲೆ ಅರಿವು ಮೂಡಿಸುವ ಚಿತ್ರ ಮತ್ತು ಬರಹಗಳನ್ನು ಮುದ್ರಿಸಲಾಗಿರುತ್ತದೆ.
ಶಾಲಾ ಹಂತದಲ್ಲಿಯೇ ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸುವುದು ಬಹು ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಬೀಡಿ, ಸಿಗರೇಟ್ ಇತರೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರ ದುಷ್ಪರಿಣಾಮ ತೀವ್ರವಾಗಿದ್ದು ಅದರಿಂದ ಹೊರಬರುವುದು ಕೂಡ ಅತ್ಯಂತ ಕಷ್ಟವಾಗಿರುತ್ತದೆ. ಹಾಗೂ ಈ ಮಾದಕ ವಸ್ತುಗಳನ್ನು ಕೊಳ್ಳಲು ಅವಶ್ಯಕವಾದ ಹಣಕ್ಕಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹ ಮಕ್ಕಳು ತೊಡಗುವ ಸಾಧ್ಯತೆ ಇದ್ದು ಇಂತಹ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಬೆಲೆ ಕೂಡ ಸಿಗುವುದಿಲ್ಲ. ಆದ್ದರಿಂದ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಅಧ್ಯಯನನಿರತರಾಗಿ ಉನ್ನತ ಮಟ್ಟದ ಹುದ್ದೆಗಳಿಗೇರಬೇಕು. ದಯಮಾಡಿ ಯಾವುದೇ ಮಕ್ಕಳು ಈ ದ್ರವ್ಯಗಳನ್ನು ಮುಟ್ಟಬಾರದು ಎಂದು ತಿಳಿ ಹೇಳಿದರು.
ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸಮಾಜದ ಬೆಳೆವಣಿಗೆ ವಿಷಯವನ್ನು ಆಧರಿಸಿ ರಚಿಸಿರುವ ಚಿತ್ರಕಲೆ ಮತ್ತು ಪ್ರಬಂಧಗಳು ಪ್ರಬುದ್ಧವಾಗಿವೆ. ದುಷ್ಪರಿಣಾಮ ಕುರಿತು ಅವರ ಯೋಚನಾ ಲಹರಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದು, ಮಕ್ಕಳ ಸೃಜನಾತ್ಮಕತೆ ಎಲ್ಲರೂ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ ಅವರು ಜಾಗೃತಿ ಅಭಿಯಾನ ನಡೆಸಿದ ಪೊಲೀಸ್ ಇಲಾಖೆ ಮತ್ತು ವಿವಿಧ ಜಾಗೃತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಇಂದು ಇದರ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 50 ಶಾಲೆಗಳಿಗೆ ಭೇಟಿ ನೀಡಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡು ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. ಹದಿ ಹರೆಯದ ವಿದ್ಯಾರ್ಥಿಗಳು ಕೂಡುವ 30 ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ.
ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾದಕ ದ್ರವ್ಯ ವಸನ ದುಷ್ಪರಿಣಾಮಗಳ ಕುರಿತು ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಮನೋೀಜ್ಞವಾಗಿ ವಿಷಯವನ್ನು ಚಿತ್ರಿಸಿದ್ದಾರೆ. ಇದಕ್ಕೆ ನಾನು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಾಮಾನ್ಯವಾಗಿ 15 ರಿಂದ 20 ವಯಸ್ಸಿನವರು ಮಾದಕ ವ್ಯಸ್ತುಗಳನ್ನು ಯಾವುದೋ ಸೆಳೆತಕ್ಕೋ ಅಥವಾ ಒತ್ತಡಕ್ಕೋ ಒಳಗಾಗಿ ಮೊದಲು ಪ್ರಯೋಗಿಸುತ್ತಾರೆ. ನಂತರ ಅದರ ಗೀಳು ಅಂಟಿಸಿಕೊಂಡು ಚಟಕ್ಕೆ ಬಲಿಯಾಗುತ್ತಾರೆ. ಆದ್ದರಿಂದ ಈ ವಯಸ್ಸಿನ ಗುಂಪಿನವರನ್ನು ಗುರಿಯಾಗಿಸಿಕೊಂಡು ಅರಿವು ಮತ್ತು ಜಾಗೃತಿ ಮೂಡಿಸಿದಲ್ಲಿ ಅವರನ್ನು ಈ ದುಷ್ಪರಿಣಾಮದಿಂದ ಪಾರು ಮಾಡಬಹುದು.
ಈ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಡುವ ಶಾಲೆಗಳನ್ನು ಪಟ್ಟಿ ಮಾಡಿ ಆ ಶಾಲೆಗಳ ಮುಖ್ಯೋಪಾಧ್ಯಾಯರು ಅಥವಾ ದೈಹಿಕ ಶಿಕ್ಷಕರೊಂದಿಗೆ ಸಭೆ ನಡೆಸಿ ಮಾದಕ ದ್ರವ್ಯ ಮತ್ತು ಇತರೆಯಿಂದ ತೊಂದರೆಗೆ ಸಿಲುಕಬಹುದಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುವ ಚಿಂತನೆ ಇದೆ. ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರ ಬೇಕೆಂದು ಕೋರಿದ ಅವರು ಮಕ್ಕಳನ್ನು ಉತ್ತಮ ದಾರಿಯಲ್ಲಿ ಮುನ್ನಡೆಸಲು ಶಿಕ್ಷಣ ಮತ್ತು ಪೊಲೀಸ್ ಇಲಾಖೆಯ ಸಂಪರ್ಕ ಮತ್ತು ಸಮನ್ವಯ ಇನ್ನೂ ಗಟ್ಟಿಗೊಳ್ಳಬೇಕೆಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆ ಹಾಗೂ ದುಷ್ಕøತ್ಯಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾಗೃತಿ ಮತ್ತು ಇತರೆ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸ್ನೇಹಿಯಾಗಿದೆ. ಅನೇಕ ಸಮೀಕ್ಷೆಗಳ ಪ್ರಕಾರ ಶೇ.52 ಕ್ಕೂ ಹೆಚ್ಚು ಮಕ್ಕಳಿಗೆ ಮಾದಕ ದ್ರವ್ಯ ವಸ್ಯನದ ದುಷ್ಪರಿಣಾಮಗಳ ಅರಿವಿಲ್ಲ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮನೋತಜ್ಞ ಡಾ.ಅರವಿಂದ್ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೂ ಇದೇ ವೇಳೆ ಮಾದಕ ದ್ರವ್ಯ ವ್ಯಸನ ಹೇಗೆ ಇಡೀ ಕುಟುಂಬವನ್ನು ತೊಂದರೆಗೀಡು ಮಾಡುತ್ತದೆ ಎಂಬ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಬಹುಮಾನ ವಿತರಣೆ :
ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ 63 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್‍ಪಿ ಹೆಚ್.ಟಿ.ಶೇಖರ್, ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post