ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದ್ದು, ಪೋಷಕರು ಮತ್ತು ಗುರುಗಳು ಧನಾತ್ಮಕ ಚಿಂತನೆಗಳನ್ನು ತುಂಬಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಅವರು ಇಂದು ಗುರು ಪೂರ್ಣೀಮೆ ಅಂಗವಾಗಿ ನಗರದ ದುರ್ಗಿಗುಡಿ ಆಂಗ್ಲಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರಂತರ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ನಾವು ಈ ಹಂತಕ್ಕೆ ಬೆಳೆಯಲು ಗುರುಗಳೇ ಕಾರಣ. ಜಗತ್ತಿನ ಖ್ಯಾತ ವ್ಯಕ್ತಿಗಳಾದ ಥಾಮಸ್ ಆಲ್ವಾ ಎಡಿಸನ್, ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಯಶಸ್ಸಿಗೆ ಅವರ ತಾಯಂದಿರೇ ಕಾರಣ ಎಂದರು.
ಪ್ರತಿಯೊಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮವಶ್ವಾಸ ಅದನ್ನು ಬೆಳೆಸುವ ಶಕ್ತಿ ಇರುವುದು ಮೊದಲು ತಾಯಿಗೆ, ನಂತರ ತಂದೆಗೆ, ಆಮೇಲೆ ಗುರುಗಳಿಗೆ. ವ್ಯಕ್ತಿಯ ತಳಪಾಯ ಗಟ್ಟಿಮಾಡುವುದೇ ಪ್ರಾಥಮಿಕ ಶಿಕ್ಷಣ. ಅಲ್ಲಿನ ಗುರುಗಳ ಮಾರ್ಗದರ್ಶನವನು ಮಕ್ಕಳು ಎಂದಿಗೂ ಮರೆಯುವುದಿಲ್ಲ. ಪ್ರಾಥಮಿಕ ಹಂತದಲ್ಲೇ ಧನಾತ್ಮಕ ಚಿಂತನೆ ತುಂಬಿ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಾಗದಂತೆ ಗುರುಗಳು ನೋಡಿಕೊಳ್ಳಬೇಕು ಎಂದರು.
ಆತ್ಮವಿಶ್ವಾಸ ತುಂಬಲು ನಾಲ್ಕು ಪ್ರಮುಖ ವಿಷಯಗಳಿದ್ದು, ಏನೇ ಹೇಳಿಕೊಟ್ಟರೂ ಮಕ್ಕಳಿಗೆ ಧನಾತ್ಮಕವಾಗಿ ಸಲಹೆ ನೀಡಿ. ಮಕ್ಕಳ ಮೇಲೆ ಪ್ರೀತಿ ಎಂಬುದು ಹೃದಯದಲ್ಲಿರಬೇಕೇ ಹೊರತು ಮೆದಳಲ್ಲಿರಬಾರದು. ಹಠ ಮಾಡುತ್ತಾರೆ ಎಂದು ಕೇಳಿದ್ದನ್ನೆಲ್ಲಾ ಕೊಡಿಸಬಾರದು. ಅನಗತ್ಯ ಬೇಡಿಕೆಗಳನ್ನು ಪೂರೈಸಬಾರದು. ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕøತಿ ಆಚಾರ, ವಿಚಾರ, ವಿವೇಕವನ್ನು ಹೇಳಿಕೊಡಬೇಕು. ವಿದ್ಯೆಯ ಜೊತೆಗೆ ಅವರಲ್ಲಿರುವ ಬುದ್ಧಿಮತ್ತೆಯನ್ನು ಹೆಚ್ಚಿಸಬೇಕು ಎಂದರು.
Also read: ಗೌಡ ಸಾರಸ್ವತ ಸಮಾಜದ ಸ್ವಯಂಸೇವಕ ನಾಗೇಶ್ ನಿಧನ
ಮಕ್ಕಳಿಗೆ ಹಸಿವಿನ ಬೆಲೆ ತಿಳಿಸಬೇಕು. ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದ್ದು, ಅವರ ವಿವೇಚನೆಗೆ ಬಿಡಿ. ಕೇಳಿದ್ದಕ್ಕೆಲ್ಲಾ ಎಸ್ ಎಂದು ಹೇಳಬೇಡಿ. ಸಣ್ಣಪುಟ್ಟ ಮಕ್ಕಳ ಎಲ್ಲಾ ಸಮಸ್ಯೆಗಳಿಗೆ, ಜಗಳಕ್ಕೆ ಪೋಷಕರು ಮಧ್ಯ ಪ್ರವೇಶ ಮಾಡಬಾರದು. ಹಂಚಿ ತಿನ್ನುವ ಅಭ್ಯಾಸ ಕಲಿಸಿ. ದುಡ್ಡಿನ ಕೊರತೆಯ ಮತ್ತು ಮಹತ್ವದ ಬಗ್ಗೆ ತಿಳಿಸಿ.ಮಕ್ಕಳ ತಪ್ಪನ್ನು ಹುಡುಕಿ ಪದೇಪದೇ ಹಂಗಿಸಬೇಡಿ. ಕೊಡುವಂತಹ ಗುಣ ಕಲಿಸಿದರೆ ಅವನಿಗೆ ಆತ್ಮತೃಪ್ತಿ ಉಂಟಾಗುತ್ತದೆ. ಊಟ ಶರೀರಕ್ಕೆ, ಪಾಠ ಮೆದುಳಿಗೆ, ಆಟ ಮನಸ್ಸಿಗೆ ಮತ್ತು ಸೇವೆ ಆತ್ಮಕ್ಕೆ ತೃಪ್ತಿ ಕೊಡುತ್ತದೆ. ಮಕ್ಕಳಲ್ಲಿ ಕೊಡುವ ಮತ್ತು ಹಂಚಿ ತಿನ್ನುವ ಅಭ್ಯಸ ಕಲಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಶಿಕ್ಷಕರ ಸಂಘದ ಪದಾಧಿಕಾರಿ ದೀಪಾ, ಮಕ್ಕಳನ್ನು ಕುರಿತು ಮಾತನಾಡಿದರು. ಮಕ್ಕಳಿದಂದ ಪೋಷಕರ ಪಾದಪೂಜೆ ನಡೆಯಿತು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಬಿ.ವಿ. ಹೊಳ್ಳುರು, ಕಾರ್ಯಕ್ರಮ ಸಂಘಟಿಸಿದ ನಿರಂತರ ಸಂಸ್ಥೆಯ ಚೈತ್ರಾ ಸಜ್ಜನ್ ಇದ್ದರು.
Discussion about this post