ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುತೇಕ ನಾಗರಿಕರು ಅವೈಜ್ಞಾನಿಕ 24×7 ನೀರಿನ ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಇನ್ನಿತರ ಮಹಾನಗರಗಳಿಗೆ ನೀರಿನ ಕಂದಾಯಕ್ಕೆ ಹೋಲಿಸಿದರೆ ಶಿವಮೊಗ್ಗದಲ್ಲಿ ಈಗ ನೀಡಿರುವ ಬಿಲ್ ಹತ್ತು ಪಟ್ಟು ಜಾಸ್ತಿ ಇದೆ. ಮನಸ್ಸಿಗೆ ಬಂದ ಹಾಗೆ ನೀರಿನ ಕಂದಾಯ ವಿಧಿಸಲಾಗುತ್ತಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದೆ. ಮೊದಲು ಇದನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ಹಳೆಯ ಕಂದಾಯವನ್ನೇ ಸಂಗ್ರಹಿಸಿ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸತೀಶ್ ಕುಮಾರ್ ಶೆಟ್ಟಿ ಒತ್ತಾಯಿಸಿದರು.
ಮಹಾನಗರ ಪಾಲಿಕೆಯಲ್ಲಿ ಇಂದು 2022 -23 ನೇ ಸಾಲಿನ ಆಯವ್ಯಯ ತಯಾರಿಕೆ ಪೂರ್ವಭಾವಿಯಾಗಿ ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಮೇಯರ್ ಸುನಿತಾ ಅಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀರಿನ ಕಂದಾಯದ ಬಗ್ಗೆ ಹುಬ್ಬಳ್ಳಿ, ಧಾರವಾಡ ಮಾದರಿಯಲ್ಲಿ ತೆರಿಗೆ ವಿಧಿಸುವಂತೆ ಆಗ್ರಹಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಮೊದಲು ಬೇನಾಮಿ ಸಂಪರ್ಕಗಳನ್ನು ಅಧಿಕೃತಗೊಳಿಸಿ ಅಕ್ರಮ, ಸಕ್ರಮ ಮಾಡಿ ಎಂದು ಸಲಹೆ ನೀಡಿದರು.
ನೀರಿನ ಕಂದಾಯದ ಬಗ್ಗೆ ಸಾರ್ವಜನಿಕರಿಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಿ, ಅನೇಕ ವಿದ್ಯಾವಂತ ಯುವಕರಿದ್ದಾರೆ. ಅವರ ನೆರವು ಪಡೆದು ಜಾಗೃತಿ ಮೂಡಿಸುವ ಕೆಲಸ ಮಾಡಿ. ಅವರಿಗೂ ಉದ್ಯೋಗಹ ದೊರಕಿದಂತಾಗುತ್ತದೆ. ಹಾಗೂ ಪಾಲಿಕೆ ಆವರಣದಲ್ಲಿರುವ ಶೌಚಾಲಯವನ್ನು ಒಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿದರು.
ಇಡೀ ನಗರದಲ್ಲಿ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿವೆ. ಮೂತ್ರ ವಿಸರ್ಜನೆಗೆ 5 ರೂ. ಪಡೆಯುತ್ತಾರೆ. ವೃದ್ಧರು, ರೋಗಿಗಳು ಸೇರಿದಂತೆ ಜನ ಬಸ್ ನಿಲ್ದಾಣದಲ್ಲಿ ತುರ್ತಾಗಿ ಶೌಚಾಲಯಕ್ಕೆ ಹೋದರೆ, ಅಲ್ಲಿನ ಸ್ಥಿತಿ ನೋಡಿದಾಗ ವಾಕರಿಕೆ ಬರುತ್ತದೆ ಮೊದಲು ಸರಿಯಾಗಿ ಶೌಚಾಲಯ ನಿರ್ವಹಣೆ ಮಾಡಿ ಎಂದು ಸಲಹೆ ನೀಡಿದರು.
ಆಯುಕ್ತ ಚಿದಾನಂದ ವಠಾರೆ ಮಾತನಾಡಿ, ಈಗಾಗಲೇ ನಗರದ ಬಹುತೇಕ ಕನ್ಸರ್ ವೆನ್ಸಿಗಳಲ್ಲಿ ಟಾಯ್ಲೆಟ್ ಗಳನ್ನು ನಿರ್ಮಿಸಿ ಅದಕ್ಕೆ ನೀರು ಮತ್ತು ವಿದ್ಯುತ್ ಒದಗಿಸಿ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಸಹ ನೀರು ಮತ್ತು ವಿದ್ಯುತ್ ಇಲ್ಲದೇ ಹಾಗೂ ನಿರ್ವಹಣೆಗೆ ಯಾರೂ ಮುಂದೆ ಬಾರದ ಕಾರಣ ಸಮಸ್ಯೆಯಾಗಿತ್ತು. ಈಗ ಎಲ್ಲಾ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲೇ ಎಲ್ಲಾ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಸರಿಯಾಗಲಿದೆ ಎಂದರು.
ಪಾಲಿಕೆ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಒತ್ತುವರಿ ತೆರವುಗೊಳಿಸಿ ಸ್ಮಾರ್ಟ್ ಸಿಟಿ ಅನದಾನದಲ್ಲಿ ಅಭಿವೃದ್ಧಿಪಡಿಸಬೇಕೆಂದು ಕೆಲವರು ಸಲಹೆ ನೀಡಿದರು. ತ್ಯಾವರ ಚಟ್ನಹಳ್ಳಿ ಕೆರೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೇ ಗಿಡಗಂಟಿಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಸಾರ್ವಜನಿಕರ ಹಣವನ್ನು ಈ ರೀತಿ ದುರುಪಯೋಗಪಡಿಸಬೇಡಿ, ನಿರ್ವಹಣೆಗೂ ಕ್ರಮ ಕೈಗೊಳ್ಳಿ ಎಂದು ಕೆಲವರು ಸಲಹೆ ನೀಡಿದರು.
ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕೆರೆ ಅಭಿವೃದ್ಧಿ ಕೆಲಸ ಪಾಲಿಕೆಯದ್ದಲ್ಲ, ಆದರೂ ಕಳೆದ ಬಜೆಟ್ ನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಲು ಹಣವನ್ನು ನೀಡಲಾಗಿತ್ತು. ಸೂಡಾ ಸಹಕಾರದಿಂದ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ನಿರ್ವಹಣೆ ನಮ್ಮ ವ್ಯಾಪ್ತಿಯಲ್ಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮೇಯರ್, ಸಾರ್ವಜನಿಕರ ಸಭೆ ಕರೆದು ಕೆರೆ ಅಭಿವೃದ್ಧಿಪಡಿಸಿ ಸುತ್ತಲೂ ಗಿಡ ನೆಡುವುದರ ಬಗ್ಗೆ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗುವುದು. ವಿಶೇಷ ಸಭೆ ನಡೆಸಿ ಸಾರ್ವಜನಿಕರ ಸಲಹೆ ಗಮನಿಸಲಾಗುವುದು ಎಂದರು.
ಸಭೆಯಲ್ಲಿ ಉಪಮೇಯರ್ ಶಂಕರ್ ಗನ್ನಿ, ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯರಾದ ವಿಶ್ವಾಸ್, ಲತಾ ಗಣೇಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post