ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೃದಯಭಾಗದಲ್ಲಿರುವ ಕಮಲಾನೆಹರೂ ಕಾಲೇಜು ಮತ್ತು ಕಸ್ತೂರಬಾ ಕಾಲೇಜು ನಡುವಿನ ಕನ್ಸರ್‌ವೆನ್ಸಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ, ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಬೇಕೆಂದು ನೆಹರೂ ರಸ್ತೆಯ ವ್ಯಾಪಾರಸ್ಥರ ಸಂಘದ ಬಹುದಿನದ ಬೇಡಿಕೆಯ ಅಂಗವಾಗಿ ಇಂದು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ನೆಹರೂ ರಸ್ತೆಯಲ್ಲಿ #Nehru Road 300ಕ್ಕೂ ಹೆಚ್ಚು ಮಳಿಗೆಗಳಿದ್ದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಮತ್ತು ಮಾಲೀಕರ ವಾಹನಗಳ ನಿಲುಗಡೆಗೆ ಅವಕಾಶದ ಕೊರತೆಯಿತ್ತು. ಅವರು ವಾಹನಗಳನ್ನು ನಿಲ್ಲಿಸಿದ್ದಾಗ ಅಲ್ಲಿಗೆ ಬರುವ ಗ್ರಾಹಕರ ವಾಹನಗಳಿಗೆ ಪಾರ್ಕಿಂಗ್ ಜಾಗವಿಲ್ಲದೆ ಗ್ರಾಹಕರು ಬರುವುದೇ ನಿಲ್ಲಿಸಿದ್ದರು. ಇತ್ತೀಚೆಗೆ ಹಿಂದಿನ ಜಿಲ್ಲಾರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ವ್ಯಾಪಾರಸ್ಥರ ಸಂಘದ ಸದಸ್ಯರು ಹಲವಾರು ಕ್ರಮಗಳ ಬಗ್ಗೆ ಚರ್ಚಿಸಿದ್ದರು. ಅದರ ಭಾಗವಾಗಿ ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್ ಅವರು ಕೂಡ ಕೆಲವೊಂದು ಕ್ರಮ ಕೈಗೊಂಡಿದ್ದು, ಪಾಲಿಕೆ ಆಯುಕ್ತರು ಕೂಡ ಗಂಭೀರವಾಗಿ ಪರಿಗಣನೆ ಮಾಡಿ ಸ್ಪಂದಿದ್ದಾರೆ.
ವಾಸ್ತವವಾಗಿ ಕಮಲಾ ನೆಹರೂ ಕಾಲೇಜು ಮತ್ತು ಕಸ್ತೂರ ಬಾ ಕಾಲೇಜು ನಡುವೆ ಸುಮಾರು 10 ಅಡಿ ಅಗಲದ ರಾಜಕಾಲುವೆ ಹರಿಯುತ್ತಿದ್ದು, ಎರಡೂ ಕಾಲೇಜಿನಲ್ಲಿ ವಿದ್ಯಾರ್ಥಿನೀಯರು ಓದುತ್ತಿರುವುದರಿಂದ ಮತ್ತು ಮಳೆಗಾಲದಲ್ಲಿ ರಾಜಕಾಲುವೆಯು ತುಂಬಿ ಕಾಲೇಜಿನ ಒಳಗೆ ನೀರು ಬರುತ್ತಿದ್ದುದರಿಂದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಮುಖಂಡರು ರಾಜಕಾಲುವೆಯ ಎರಡೂ ಭಾಗದಲ್ಲಿ ತಡೆಗೋಡೆ ನಿರ್ಮಿಸಿ ಕಾಲುವೆಯ ಮಧ್ಯಭಾಗದಲ್ಲಿ ಯಾರೂ ಓಡಾಡದಂತೆ ಗೇಟನ್ನು ನಿರ್ಮಿಸಿದ್ದರು. ಇದರಿಂದ ಕಾಲೇಜಿನವರು ರಾಜಾ ಕಾಲುವೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯ ವ್ಯಾಪಾರಸ್ಥರು ಎನ್‌ಇಎಸ್ ಕಾಲೇಜಿನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ರಾಜಾ ಕಾಲುವೆ ಮೇಲೆ ಇದ್ದ ಒತ್ತುವರಿಯನ್ನು ತೆರೆವುಗೊಳಿಸಿದ್ದು, ಗೇಟನ್ನು ತೆಗೆಯಿಸಿ ಪಕ್ಕದಲ್ಲೇ ಇರುವ ಕನ್ಸರ್‌ವೆನ್ಸಿಯನ್ನೂ ಕೂಡ ಅಭಿವೃದ್ಧಿಪಡಿಸಿ ನೆಹರೂ ರಸ್ತೆಯ ವ್ಯಾಪಾರಸ್ಥರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂಬುದು ವ್ಯಾಪಾರಸ್ಥರ ಆಗ್ರಹವಾಗಿತ್ತು. ಈಗ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿದ್ದು, ಇಂದು ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ರಂಗನಾಥ್, ಸತೀಶ್ ಹಿರೇಮಠ್, ಸದಾನಂದ್‌ನಾಯಕ್, ಪಾಲಿಕೆ ಎಇಇ ಜ್ಯೋತಿ, ಜ್ಯೂನಿಯರ್ ಇಂಜಿನಿಯರ್ ವಸಂತ್, ಹೆಲ್ತ್‌ಇನ್ಸ್‌ಪೆಕ್ಟರ್ ವಸಂತ, ಟ್ರಾಫಿಕ್ ಸಿಪಿಐ ದೇವರಾಜ್, ಅರ್ಚನಾ ನಿರಂಜನ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















