ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಬಕಾರಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿರುವ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಭ್ರಷ್ಟ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿವತಿಯಿಂದ ಇಂದು ಶಿವಪ್ಪನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಈ ಸರ್ಕಾರ ಕಲೆಕ್ಷನ್, ಕರೆಪ್ಷನ್ ಮತ್ತು ಕಮೀಷನ್ ಮೂರು `ಸಿ’ಗಳ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಬಂದಾಗಿನಿಂದ ಹಾಲಿನಿಂದ ಹಾಲ್ಕೋಹಾಲ್‍ವರೆಗೆ ಯಾವುದೇ ಪದಾರ್ಥವನ್ನು ಬಿಡದೆ ಮನಬಂದಂತೆ ಬೆಲೆ ಏರಿಕೆ ಮಾಡಲಾಗಿದೆ. ವಿದ್ಯುತ್, ಛಾಪಾ ಕಾಗದ, ನೋಂದಣಿ ಶುಲ್ಕ, ಯಾವುದನ್ನೂ ಬಿಟ್ಟಿಲ್ಲ. ವರ್ಗಾವಣೆಗೆ ಕಮೀಷನ್, ಲೈಸೆನ್ಸ್ ನೀಡಲು ಕಮೀಷನ್, ಸರ್ಕಾರದ ಯಾವುದೇ ಮಂಜೂರಾತಿಗೂ ಕಮೀಷನ್ ಪಡೆಯುತ್ತಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಪ್ರತಿ ಮದ್ಯದಂಗಡಿಗೆ ತಿಂಗಳಿಗೆ 10 ಸಾವಿರದಿಂದ 20 ಸಾವಿರದ ವರೆಗೆ ಫಿಕ್ಸ್‍ಮಾಡಿದ್ದು, ಒಂದೊಂದು ಏರಿಯಾದಿಂದ ಮೂರುರಿಂದ 4 ಲಕ್ಷ ವಸೂಲಿಗೆ ಟಾರ್ಗೇಟ್ ನೀಡಲಾಗಿದೆ. ಇಲಾಖೆಗೆ ವಾರ್ಷಿಕ ಕಡ್ಡಾಯವಾಗಿ 40 ಸಾವಿರ ಕೋಟಿ ಟಾರ್ಗೇಟ್ ನೀಡಲಾಗಿದ್ದು, ಒಂದೊಂದು ಲೈಸೆನ್ಸ್‍ಗೆ ಒಂದೊಂದು ಶುಲ್ಕವನ್ನು ನಿಗಧಿಪಡಿಸಲಾಗಿದೆ. ಉನ್ನತ ಅಧಿಕಾರಿಗಳ ವರ್ಗಾವಣೆಗೆ ಒಂದೂವರೆ ಕೋಟಿ ನಿರೀಕ್ಷಕರಿಗೆ 30 ರಿಂದ 70 ಲಕ್ಷ ರೂ.ಗಳನ್ನು ವರ್ಗಾವಣೆಗಾಗಿ ಪಡೆಯುತ್ತಿದ್ದು, ಈ ಸರ್ಕಾರದ ಭ್ರಷ್ಟಾಚಾರವನ್ನು ಕರ್ನಾಟಕದ ಏಳುಕೋಟಿ ಜನ ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಈ ಸರ್ಕಾರದ ಮೇಲೆ ದಾಖಲೆ ಸಹಿತ ಆರೋಪ ಹೋರಿಸಿದರೂ ಏನೂ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಮೊಂಡುತನದ ಪ್ರದರ್ಶನ ಮಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತಿದ್ದು, ಅದಕ್ಕೆ ತದ್ವಿರುದ್ಧವಾಗಿ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲಿ ವರ್ತನೆ ಮಾಡುತ್ತಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ವಿಧಾನಸಭಾ ಅಧಿವೇಶನದಲ್ಲಿ ಮೋದಿಗೆ ರಾಷ್ಟ್ರದ್ರೋಹಿ ಎಂದ ನಜೀರ್ ಅಹ್ಮದ್ ಅವರೇ ರಾಷ್ಟ್ರದ್ರೋಹಿಯಾಗಿದ್ದು ಅವರಿಗೆ ಕಾಂಗ್ರೆಸ್ ಎಂಎಲ್‍ಸಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಇದು ಸಾಂಕೇತಿಕ ಹೋರಾಟ ಅಷ್ಟೇ. ಕಾಂಗ್ರೆಸ್‍ಗೆ ನಾಚಿಕೆ, ಮಾನ-ಮರ್ಯಾದೆ ಯಾವುದೂ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರು ಕಡುಬಡವರು ಕೂಡ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಚಂದಾನೀಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಉದಯಕ್ಕೆ ಕಾರಣರಾಗಿದ್ದರು. ಆ ಸಂಸ್ಥೆಯನ್ನು ಕೂಡ ಕಾಂಗ್ರೆಸ್ ತನ್ನ ಸ್ವತ್ತಾಗಿ ಅಕ್ರಮವಾಗಿ ಮಾಡಿಕೊಂಡಿದೆ. ವಿಧಾನಸಭೆಯಲ್ಲಿ ಅಬಕಾರಿ ಹಗರಣವನ್ನು ದಾಖಲೆಸಹಿತ ಎಳೆಎಳೆಯಾಗಿ ಬಿಡಿಸಿದ್ದರೂ ಸರ್ಕಾರ ಇನ್ನೂ ಯಾವುದೇ ಕ್ರಮವನ್ನು ಅಬಕಾರಿ ಸಚಿವರ ಮೇಲೆ ಕೈಗೊಂಡಿಲ್ಲ. ಹಿಂದೆ ಬಿಜೆಪಿ ಸಚಿವರ ಮೇಲೆ ಅನಾವಶ್ಯಕ ಸುಳ್ಳು ಆರೋಪ ಮಾಡಿದ್ದರು. ಆದರೆ ಯಾವುದೇ ದಾಖಲೆ ನೀಡಿರಲಿಲ್ಲ. ಇಂದು ಬಿಜೆಪಿ ಎಲ್ಲಾ ದಾಖಲೆ ನೀಡಿದರೂ ಸಹ ಈ ಕೆಟ್ಟ ಮನಸ್ಸಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದೆ.
ನರೇಗಾ ಹೆಸರಿನಲ್ಲಿ ಪ್ರತಿ ಗ್ರಾ.ಪಂಚಾಯತ್‍ನಲ್ಲಿ ಆಗುತ್ತಿರುವ ಲೂಟಿಯನ್ನು ತಪ್ಪಿಸಲು ಕೇಂದ್ರ ವಿಬಿಜಿ ರಾಮ್-ಜಿ ಯೋಜನೆ ತಂದಿದ್ದು ರಾಜ್ಯಕ್ಕೆ ಸಹಿಸಲಾಗುತ್ತಿಲ್ಲ. ಕಾಂಗ್ರೆಸ್ಸನ್ನು ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ವಿಸರ್ಜಿಸಬೇಕೆಂದು ಮಹಾತ್ಮಗಾಂಧಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಅವರನ್ನು ಪಕ್ಕಕ್ಕೆ ಸರಿಸಿ ಇಂದಿರಾ, ರಾಜೀವ್, ಸೋನಿಯಾ ಮತ್ತು ರಾಹುಲ್‍ಗಾಂಧಿ ಹೆಸರಿನಲ್ಲಿ ತಾವೇ ಗಾಂಧಿ ಪರಿವಾರದವರೆಂದು ಬಿಂಬಿಸಿ, ರಾಜಕೀಯ ಲಾಭಕ್ಕಾಗಿ ಮಹಾತ್ಮಗಾಂಧಿ ಹೆಸರನ್ನು ಬಳಸಿಕೊಂಡ ಕಾಂಗ್ರೆಸ್ಸಿನ ನಿಜಬಣ್ಣ ದೇಶದ ಜನತೆಗೆ ಗೊತ್ತಾಗಿದೆ. ಶೇ.90ರಷ್ಟು ಕಾಂಗ್ರೆಸ್ ಈಗಾಗಲೇ ನಿರ್ಮೂಲನೆಗೊಂಡಿದೆ. ಇನ್ನೂ ಕೆಲವೇ ರಾಜ್ಯಗಳಲ್ಲಿ ಕಾಂಗ್ರೆಸ್ ಇದ್ದು ಅದು ಕೂಡ ಮಾಯವಾಗಲಿದೆ. ಮತದಾರ ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಭ್ರಷ್ಟಾಚಾರ ರಾಜ್ಯದ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ಕೂಡಲೇ ಅಬಕಾರಿ ಸಚಿವರು ರಾಜೀನಾಮೆ ನೀಡದಿದ್ದರೆ ಅದರ ಪರಿಣಾಮ ಕಾಂಗ್ರೆಸ್ ರಾಜ್ಯದಲ್ಲಿ ಸರ್ವನಾಶವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋಹನ್‍ರೆಡ್ಡಿ, ಜ್ಞಾನೇಶ್ವರ್, ನಾಗರಾಜ್, ಜ್ಯೋತಿಪ್ರಕಾಶ್, ದೀನ್‍ದಯಾಳ್, ಮಂಜುನಾಥ್, ಮಾಲತೇಶ್, ಹರಿಕೃಷ್ಣ, ರಶ್ಮಿ ಶ್ರೀನಿವಾಸ್, ಹರೀಶ್‍ನಾಯ್ಕ, ಶಾಂತಾ ಸುರೇಂದ್ರ, ಸುರೇಖಾ ಮರುಳೀಧರ್, ವಿನ್ಸೆಂಟ್ ರೋಡ್ರೀಗಸ್, ಬಳ್ಳೇಕೆರೆ ಸಂತೋಷ್, ಚೈತ್ರಾನಾಯಕ್, ಎಸ್. ಚಂದ್ರಶೇಖರ್, ಸುಮಾ ಭೂಪಾಳಂ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















