ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಆಡಳಿತಾವಧಿಯಲ್ಲಿ ಡಿಸಿಸಿ ಬ್ಯಾಂಕ್‍ನ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #Ayanuru Manjunath ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ #DCC Bank ಸುಮಾರು 98 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಒಂದೊಂದು ಹುದ್ದೆಗೂ 45-50 ಲಕ್ಷ ರೂ. ಪಡೆಯಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಿಕೊಳ್ಳಲಾಗಿದೆ. ಅರ್ಹತೆ ಇಲ್ಲದವರಿಗೂ ಕೂಡ ಹುದ್ದೆ ನೀಡಲಾಗಿದೆ. ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ ಆಡಳಿತ ಮಂಡಳಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.

ಇಡೀ ನೇಮಕ ಪ್ರಕ್ರಿಯೆಯನ್ನೇ ಉಲ್ಲಂಘಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ಕೂಡ ವಾಪಸ್ ಪಡೆಯಲಾಗಿದೆ. ಪರೀಕ್ಷೆಯಲ್ಲಿ ಪಡೆದಿರುವ ಮೆರಿಟ್ ಅಂಕಗಳನ್ನು ಆಡಳಿತ ಮಂಡಳಿಗೆ ಮಂಡಿಸಿರುವುದಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಮಾಹಿತಿಯನ್ನೂ ನೀಡಿಲ್ಲ. ಸಂದರ್ಶನದ ಕರೆ ಪತ್ರ ನೀಡದೇ ದೂರವಾಣಿ ಮೂಲಕ ಕರೆಸಿಕೊಂಡು ಸಂದರ್ಶನ ಮಾಡಲಾಗಿದೆ. ಆದೇಶವನ್ನೂ ಕೂಡ ಅಂಚೆ ಮೂಲಕ ಮಾಡದೇ ಖುದ್ದಾಗಿ ಕರೆಸಿಕೊಂಡು ಮಾಡಲಾಗಿದೆ. ಇವೆಲ್ಲವೂ ನಿಯಮಕ್ಕೆ ವಿರುದ್ಧವಾಗಿವೆ ಎಂದರು.
ನೇಮಕಗೊಂಡ 98 ಉದ್ಯೋಗಿಗಳಿಗೆ ಇನ್ನೂ ಪ್ರೊಬೇಷನರಿ ಇರುವಾಗಲೇ ಅವರಿಗೆ ತಮ್ಮದೇ ಬ್ಯಾಂಕ್‍ನಿಂದ ಸಾಲ ಮಂಜೂರು ಮಾಡಲಾಗಿದೆ. ವಿಚಿತ್ರ ಎಂದರೆ ಈ ಸಾಲ ಏಕ ಕಾಲದಲ್ಲಿ ಬಿಡುಗಡೆಯಾಗಿ ಏಕ ಕಾಲದಲ್ಲೇ ಡ್ರಾ ಕೂಡ ಆಗಿದೆ. ಈ ಹಣ ಪೂರ್ವ ನಿಗದಿಯಂತೆ ಲಂಚ ಕೊಡಲು ಸಾಲ ನೀಡಲಾಗಿದೆ. ಬ್ಯಾಂಕಿನ ಇತಿಹಾಸದಲ್ಲಿ ಲಂಚಕ್ಕಾಗಿ ಸಾಲ ಮಂಜೂರು ಮಾಡಿದ್ದು ಇದೇ ಮೊದಲು. ತನಿಖೆ ಮಾಡಿದರೆ ಇದೆಲ್ಲ ಗೊತ್ತಾಗುತ್ತದೆ. ಕೆಲವರನ್ನು ಹೊರತುಪಡಿಸಿ ಅಧ್ಯಕ್ಷರಿಂದ ಹಿಡಿದು ನಿರ್ದೇಶಕರವರೆಗೂ ಈ ಲಂಚದ ಹಣ ತಲುಪಿರಬಹುದು ಎಂದು ಆರೋಪಿಸಿದರು.

ಇದರ ಜೊತೆಗೆ ಜುಲೈ 1, 2021 ರಿಂದ ಮಾರ್ಚ್ 30, 2022ರವರೆಗಿನ ತುಟ್ಟಿಭತ್ಯೆ ಬಾಕಿ ಮೊತ್ತ ಸುಮಾರು 1.06 ಕೋಟಿ ರೂ.ಗಳನ್ನು ಕೂಡ ಮೊದಲು ನೌಕರರ ಉಳಿತಾಯ ಖಾತೆಗೆ ಜಮಾ ಮಾಡಿ ಅದೇ ದಿನ ಉಳಿತಾಯ ಖಾತೆಯಿಂದ ಹಣ ವಾಪಸ್ ಪಡೆದು ಆಡಳಿತ ಮಂಡಳಿಯ ಕೆಲ ನಿರ್ದೇಶಕರಿಗೆ ಮತ್ತು ಅಧ್ಯಕ್ಷರಿಗೆ ಹಂಚಲಾಗಿದೆ. ಹಣದ ವಿಲೇವಾರಿ ಕೂಡ ಒಂದೇ ದಿನ ನಡೆದಿರುವುದು ಅನುಮಾನಕ್ಕೆ ಆಸ್ಪದವಾಗಿದೆ ಎಂದರು.
Also read: Chief Minister Siddaramaiah Visit to Delhi | CM to Meet PM Modi on June 29th
ನೇಮಕಾತಿಗೆ ಸಂಬಂಧಿಸಿದಂತೆ ಆಗಿರುವ ಲೋಪಗಳ ಬಗ್ಗೆ ಸರ್ಕಾರದಿಂದ ಸಹಕಾರ ಉಪನಿಬಂಧಕರಿಗೆ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈಗ ವಿಚಾರಣಾಧಿಕಾರಿ ವರದಿ ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ನ್ಯಾಯಾಲಯದಲ್ಲಿ ಹುದ್ದೆ ವಂಚಿತರು ಕೇಸನ್ನೂ ಕೂಡ ದಾಖಲು ಮಾಡಿದ್ದಾರೆ. ಒಂದು ವೇಳೆ ಹುದ್ದೆ ವಂಚಿತರ ಪರವಾಗಿ ತೀರ್ಪು ಬಂದರೆ ನೇಮಕಾತಿಗಾಗಿ ಲಕ್ಷಾಂತರ ರೂ. ಲಂಚ ನೀಡಿ ಕೆಲಸ ಗಿಟ್ಟಿಸಿಕೊಂಡವರ ಗತಿ ಏನು? ಅವರ ಹಣ ವಾಪಸ್ ಬರುವುದೇ ಎಂದು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎಸ್.ಟಿ. ಹಾಲಪ್ಪ, ಸಿ.ಎಸ್. ಚಂದ್ರಭೂಪಾಲ್, ಯು. ಶಿವಾನಂದ್, ಶಿ.ಜು. ಪಾಶಾ, ಜಿ.ಡಿ. ಮಂಜುನಾಥ್, ಉದ್ಯೋಗ ವಂಚಿತ ಮಂಜುನಾಥ್ ಡಿ. ಅರಗವಳ್ಳಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post