ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ #Shivamogga ನಗರದ ಹೊಳೆಹೊನ್ನೂರು ರಸ್ತೆ ಮಾರ್ಗದಲ್ಲಿರುವ ಶ್ರೀ ಬಾಲಸುಬ್ರಮಣ್ಯ #BalasubramanyaSwamy ದೇವಸ್ಥಾನದಲ್ಲಿ ಆ.8, 9ರಂದು ವಿಜೃಂಭಣೆಯಿಂದ ನಡೆಯಲಿರುವ ಅಡಿಕೃತ್ತಿಕೆ ಗುಡ್ಡೆಕಲ್ ಜಾತ್ರೆಗೆ ಶ್ರಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವ ಸ್ಥಾನ ಟ್ರಸ್ಟ್ ವತಿಯಿಂದ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ.
ಆಷಾಢ ಅಥವಾ ಶ್ರಾವಣ #Shravana ಮಾಸದಲ್ಲಿ ಕೃತ್ತಿಕೆ ದಿನದಂದು ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಅಡಿಕೃತ್ತಿಕೆ #AdiKruttike ಅಂತಲೂ ಆಚರಿಸಲಾಗುತ್ತದೆ. ತಮಿಳುನಾಡಿನಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಈ ಸ್ಥಳದಲ್ಲಿ ಸಣ್ಣದಾದ ವಿಗ್ರಹ ಸ್ಥಾಪಿಸಿ ಪೂಜೆ ಮಾಡಲು ಆರಂಭಿಸಿದ್ದರು ಎಂಬ ಪ್ರತೀತಿ ಇದೆ.
ಗುಡ್ಡೆಕಲ್ ಜಾತ್ರೆ ಅಂಗವಾಗಿ ದೇವಸ್ಥಾನದ ಸಮೀಪದಲ್ಲಿ ಸ್ವಾಗತ ಕಮಾನು, ಶುಭ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಇನ್ನು, ನಗರದಾದ್ಯಂತ ಜಾತ್ರೆಗೆ ಶುಭಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದು, ದೇವಸ್ಥಾನ ಸಮಿತಿ, ವಿವಿಧ ಸಂಘಟನೆಗಳು ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್ ಅಳವಡಿಸಿವೆ. ದೇವಸ್ಥಾನದ ಸಮೀಪದಲ್ಲಿ ವಿವಿಧ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ಪುರಾಣ ಪ್ರಸಿದ್ಧ ಗುಡ್ಡೆಕಲ್ ಅಡಿಕೃತ್ತಿಗೆ ಜಾತ್ರೆಗೆ ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಜನರು ಬರಲಿದ್ದು, ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೆ ಅಂಗವಾಗಿ ಬೆಳಿಗ್ಗೆ 4 ಗಂಟೆಯಿಂದಲೇ ಕಾವಡಿ ಹೊತ್ತ ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ನಾನಾ ಭಾಗದಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಲಿದ್ದಾರೆ. ಅರಿಶಿನದ ಮಡಿ ವಸ್ತ್ರ ಧರಿಸಿದ ಮಹಿಳೆ ಯರು, ಮಕ್ಕಳು, ಹಿರಿಯರು, ಯುವಕ-ಯುವತಿಯರು ನಾನಾ ರೀತಿಯಿಂದ ಅಲಂಕೃತಗೊಂಡ ಕಾವಡಿ ಹೊತ್ತು ಬಾಯಿಗೆ ವೇಲಾಯುಧ ಚುಚ್ಚಿಕೊಂಡು, ಕಬ್ಬಿಣದ ಮುಳ್ಳಿನ ಪಾದುಕೆ ಧರಿಸಿ ದೇವರ ನಾಮವಾದ ಹರೋಹರ ಎಂದು ಹೇಳುತ್ತಾ ಮಂಗಳ ವಾದ್ಯದೊಂದಿಗೆ ದೇವಸ್ಥಾನಕ್ಕೆ ತೆರಳಿ ಭಕ್ತಿ ಸಮರ್ಪಿಸಲಿದ್ದಾರೆ.
ಸಂತಸದ ವಿಷಯವೇನೆಂದರೆ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ಗುಡ್ಡದ ಮೇಲೆ ವಿಶ್ವದಲ್ಲೇ ಅತಿ ಎತ್ತರದ 151 ಅಡಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ವಿಗ್ರಹದ ನಿರ್ಮಾಣ ಕಾರ್ಯ ಶೀಘ್ರದಲ್ಲೆ ಆರಂಭವಾಗಲಿದೆ. ಮಂದಿನ ದಿನಗಳಲ್ಲಿ ಗುಡ್ಡೆಕಲ್ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನ ಪ್ರವಾಸಿಗರ ತಾಣವಾಗಲಿದೆ.
Also read: ಮರಾಠಿ ನೆಲದಲ್ಲಿ ಕಪಸಮ ಕನ್ನಡ ಕಂಪನ್ನು ಹರಡುತ್ತಿರುವುದು ಹೆಮ್ಮೆಯ ಸಂಗತಿ: ಕೆ.ವಿ. ಪ್ರಭಾಕರ್
ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ಬದಲಾವಣೆ
ಆ.9ರಂದು ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಲಿರುವ ಪ್ರಯುಕ್ತ ವಾಹನಗಳ ಸುಗಮ ಸಂಚಾರದ ವ್ಯವಸ್ಥೆಗೆ ಕೆಲವೊಂದು ಷರತ್ತು ವಿಧಿಸಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ಗಳು ಮತ್ತು ಸಿಟಿ ಬಸ್ಗಳು ಹಾಗೂ ಕಾರು ವಾಹನಗಳು ಎಂ.ಆರ್.ಎಸ್. ಸರ್ಕಲ್ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಕಡೆಗೆ ಹೋಗುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ಗಳು ಮತ್ತು ಸಿಟಿ ಬಸ್ಗಳು ಹಾಗೂ ಕಾರುಗಳು ಬೈಪಾಸ್ ರಸ್ತೆ ಮೂಲಕ ಹೋಗುವುದು.
ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಶಿವಮೊಗ್ಗ ನಗರಕ್ಕೆ ಒಳಬರುವ ಮತ್ತು ಹೊರಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಒಳಬರುವ ಮತ್ತು ಹೊರಹೋಗುವ ಎಲ್ಲಾ ಭಾರಿ ವಾಹನ, ಬಸ್ಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆಯ ಮೂಲಕ ಶಿವಮೊಗ್ಗ ನಗರಕ್ಕೆ ಬರುವುದು ಮತ್ತು ಹೊರ ಹೋಗುವುದು. ಹೊಳೆಹೊನ್ನೂರು ಸರ್ಕಲ್ನಿಂದ ಗುರುಪುರದ ಯಲವಟ್ಟಿ ಕ್ರಾಸ್ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ನಿಷೇಧಿಸಿದೆ.
ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಲಘುವಾಹನಗಳು, ಪಿಳ್ಳಂಗಿರಿ ಕ್ರಾಸ್ನಿಂದ ಯಲವಟ್ಟಿ ಮಾರ್ಗವಾಗಿ ಮತ್ತು ಹೊಳೆಬೆನವಳ್ಳಿ ತಾಂಡ ಕ್ರಾಸ್ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪದ ಮೂಲಕ ಬಿ.ಹೆಚ್.ರಸ್ತೆಗೆ ಸೇರಿಕೊಂಡು ಬೈಪಾಸ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗುವುದು.
ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವ ಲಘುವಾಹನಗಳು ಬೈಪಾಸ್ ರಸ್ತೆಯ ಮಾರ್ಗವಾಗಿ ಮಲವಗೊಪ್ಪ ಯಲವಟ್ಟಿ ಕ್ರಾಸ್ನಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವುದು.
ಹರಿಹರ ಹೊನ್ನಾಳಿಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆ.ಇ.ಬಿ. ಸರ್ಕಲ್,ಉಷಾ ನರ್ಸಿಂಗ್ ಹೋಂ ಸರ್ಕಲ್, 100 ಅಡಿರಸ್ತೆ, ವಿನೋಬನಗರ ಮಾರ್ಗವಾಗಿ ಹೋಗುವುದು.
ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬ್ಯೂಲೆನ್ಸ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ಸೂಚಿಸಿದೆ.
(ವರದಿ: ರಾಕೇಶ್ ಸೋಮಿನಕೊಪ್ಪ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















