ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ನಾನು ಸಂಸ್ಕೃತ ಭಾರತೀಯ ಪ್ರಶಿಕ್ಷಣ ಪಡೆದ ಮೇಲೆ ನಾನು ಮತ್ತು ರಜನಿ ಮೇಡಂ ಸೇರಿ ಮೊದಲ ಸಂಭಾಷಣಾ ಶಿಬಿರ ಮಾಡಿದ್ದು, ಗುರುಪುರದ ಅವರ ಮನೆಯ ಮಹಡಿಯ ಮೇಲೆ. ಅಲ್ಲಿ ಸಂಸ್ಕೃತ ಕಲಿಯಲು ಬಂದವರಲ್ಲಿ ದೀಪಶ್ರೀ ಕೂಡ ಒಬ್ಬಳು. ಅಲ್ಲಿಂದ ಮೂಡಿದ ಸಂಸ್ಕೃತ ಆಸಕ್ತಿ ಸಂಸ್ಕೃತದಲ್ಲಿ ಪದವಿ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಸ್ಕೃತದಲ್ಲಿಯೇ ಸಂಶೋಧನೆಯನ್ನು ಮಾಡಿ ಡಾಕ್ಟರೇಟ್ ಪದವಿ ಪಡೆದು ತನ್ನ ಸಂಶೋಧಿತ ಪ್ರಬಂಧವನ್ನು ಒಂದು ಕೃತಿಯಾಗಿ ಪ್ರಕಟಿಸಿ ಹೊರತರುವ ಮಟ್ಟಿಗೆ ಬೆಳೆದು ಬಂದಿತೆನ್ನುವುದೇ ಒಂದು ರೀತಿಯ ಹೆಮ್ಮೆಯ ಭಾವ. ಅಲ್ಲದೇ ಆಕೆ ಈಗ ಕೆಲಸ ಮಾಡುತ್ತಿರುವುದೂ ಸಹ ಶ್ರೀ ಬೆಕ್ಕಿನ ಕಲ್ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿಯೇ.
ತನ್ನ ಶ್ರದ್ಧೆ ವಿನಯತೆಯ ಫಲವಾಗಿ ಈ ಎತ್ತರಕ್ಕೆ ಡಾ. ದೀಪಶ್ರೀ ಬೆಳೆದು ನಿಂತಿದ್ದಾಳೆಂದರೆ ಅದು ಅತಿಶಯೋಕ್ತಿಯಲ್ಲ. ಮೊದಲಿನಿಂದಲೂ-“ಮೇಡಂ ಒಂದು ಸಹಾಯ ಮಾಡ್ತೀರಾ” ಅಂತ ಕೇಳುತ್ತಿದ್ದ ಆಕೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ನಿರಂತರ ಪರಿಶ್ರಮದ ಹಾಗೂ ತಪಸ್ಸೆಂಬಂತೆ ಈ ಕಾರ್ಯ ಮಾಡಿ ಮುಗಿಸಿದ್ದಾಳೆ. ಎಲ್ಲರ ಪ್ರಶಂಸೆಗೂ ಪಾತ್ರಳಾಗಿದ್ದಾಳೆ. ಮೊನ್ನೆ ನಡೆದ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮ್ಮೇಳನದಲ್ಲಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶ್ರೀಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶಿವಮೊಗ್ಗ ಶಾಸಕರಾದ ಶ್ರೀ ಚನ್ನಬಸಪ್ಪ, ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಹಲ್ಯಾ ಹಾಗೂ ಆಕೆಯ ಸಂಶೋಧನೆಗೆ ಮಾರ್ಗದರ್ಶನ ಮಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಡಾ. ಸುಮಿತ್ರ ವಿ ಭಟ್ ಇವರುಗಳಿಂದ ಡಾ. ದೀಪಶ್ರೀ ರಮೇಶ್ ಪುಸ್ತಕ ಲೋಕಾರ್ಪಣೆಗೊಂಡಿದೆ. ಆ ಪುಸ್ತಕದ ಕುರಿತಾಗಿ ಒಂದಷ್ಟು ಬರೆಯಬೇಕೆನಿಸಿ ಬರೆದ ಲೇಖನ ಇದು.
ಕಾವ್ಯ ಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ ಎಂಬ ಮಾತಿನಂತೆ ಕಾವ್ಯಕ್ಕೆ ಶೋಭೆ ತರುವ ಅಲಂಕಾರಗಳ ಕುರಿತಾಗಿ “ಅಲಂಕಾರಗಳು : ಐತಿಹಾಸಿಕ ಅಧ್ಯಯನ” ಎಂಬ ಶೀರ್ಷಿಕೆ ಹೊಂದಿ ಬಿಡುಗಡೆಯಾದ ಪುಸ್ತಕ ಸಂಸ್ಕೃತ ಅಲಂಕಾರ ಪರಂಪರೆಯ ವಿಹಂಗಮ ನೋಟವನ್ನು ಒದಗಿಸುವ ಅತ್ಯುತ್ತಮ ಕೈಪಿಡಿಯಾಗಿದೆ.
ಶಬ್ದಾರ್ಥೌ ಸಹಿತೌ ಕಾವ್ಯಂ, ಅಲಂಕಾರೈಶ್ಚ ಶೋಭಿತಮ್l
ರಸಾತ್ಮಕಂ ಪರಂ ಬ್ರಹ್ಮ, ಪೃಥಕ್ಕಾರ್ಯಂ ನ ಯುಜ್ಯತೇ॥
ಎಂಬ ಶ್ಲೋಕ ಶಬ್ದ ಮತ್ತು ಅರ್ಥ ಎರಡೂ ಸಹಿತವಾಗಿರುವ ಸಾಹಿತ್ಯವೇ ಕಾವ್ಯ. ಅದು ಅಲಂಕಾರಗಳಿಂದ ಶೋಭಿತವಾಗಿ ರಸಭರಿತವಾಗಿ ಪರಬ್ರಹ್ಮದಂತೆ ಆಗಿ ಇದರಿಂದ ಅವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವುದು ಅಲಂಕಾರಗಳೇ ಕಾವ್ಯದ ಅಡಿಪಾಯ, ಕಾವ್ಯವೇ ರಸಭೋದನೆ ದಿವ್ಯಸಾಧನವೆಂದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ ಸಂಸ್ಕೃತ ಸಾಹಿತ್ಯದಲ್ಲಿ ಬರುವ ಅಲಂಕಾರ ಶಾಸ್ತ್ರದ ಹಿನ್ನೆಲೆಯನ್ನು ಸಮಗ್ರವಾಗಿ ಓದುಗರ ಮುಂದೆ ತೆರೆದಿಡುತ್ತದೆ. ಇದರಲ್ಲಿನ ಪ್ರಥಮ ಅಧ್ಯಾಯವು ಭರತನ ನಾಟ್ಯ ಶಾಸ್ತ್ರ ಹಾಗೂ ಭಾಮಹನ ಕಾವ್ಯಾಲಂಕಾರಗಳನ್ನು, ದ್ವಿತೀಯ ಅಧ್ಯಾಯವು ದಂಡಿಯ ಕಾವ್ಯಾದರ್ಶ ಹಾಗೂ ಆನಂದ ವರ್ಧನನ ದ್ವನ್ಯಾಲೋಕವನ್ನು, ತೃತೀಯ ಅಧ್ಯಾಯವು ಕುಂತಕನ ವಕ್ರೋಕ್ತಿ ಜೀವಿತ ಮತ್ತು ಕ್ಷೇಮೇಂದ್ರನ ಔಚಿತ್ಯ ವಿಚಾರ ಚರ್ಚೆಯನ್ನು, ಚತುರ್ಥಾಧ್ಯಾಯವು ಮಮ್ಮಟನ ಕಾವ್ಯ ಪ್ರಕಾಶ ಮತ್ತು ಅಪ್ಪಯ್ಯ ದೀಕ್ಷಿತರ ಕುವಲಯಾನಂದಗಳನ್ನು ಒಳಗೊಂಡಿದೆ. ಪಂಚಮ ಅಧ್ಯಾಯದಲ್ಲಿ ಪುಸ್ತಕದ ಸಂಪೂರ್ಣ ಸಾರವಿದೆ.
ಈ ಕೃತಿಯಲ್ಲಿ ವಿಷಯವು ಅಲಂಕಾರಗಳನ್ನು ಕೇವಲ ಶಬ್ದಾರ್ಥಗಳ ವಿಶಿಷ್ಟ ವಿನ್ಯಾಸವೇ ಅಲ್ಲದೇ ಅದು ಯಾವ ರೀತಿಯಲ್ಲಿ ಭಾರತೀಯ ಕಾವ್ಯ ಚಿಂತನೆಯ ಒಂದು ಪ್ರಮುಖ ಘಟಕವಾಗಿ ರೂಪುಗೊಂಡಿತು ಎಂಬುದನ್ನು ಅನ್ವೇಷಿಸಲಾಗಿದೆ. ಇದರಲ್ಲಿ ಐತಿಹಾಸಿಕ ಹಿನ್ನೆಲೆ ತಾತ್ವಿಕ ದೃಷ್ಟಿಕೋನಗಳು ಮತ್ತು ವಿಭಿನ್ನವಾದ ಸರಣಿಗಳ ಸಂಕ್ಷಿಪ್ತ ವಿಮರ್ಶಾತ್ಮಕ ವಿವರಣೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಲಂಕಾರಕ್ಕೂ ಸಂಬಂಧಿಸಿದ ವ್ಯಾಖ್ಯಾನಗಳನ್ನು ಬೇರೆ ಬೇರೆ ಶಾಸ್ತ್ರಕಾರರ ಅಭಿಪ್ರಾಯಗಳೊಂದಿಗೆ ಹೋಲಿಕೆ ಮಾಡುವ ಪ್ರಯತ್ನ ಇದರಲ್ಲಿ ಆಗಿದೆ.
ಅನೇಕ ಅಲಂಕಾರಗಳನ್ನು ಆಯ್ದು ಅವುಗಳ ವಿವರಣೆ ವ್ಯಾಖ್ಯಾನ ಉಪವಿಭಾಗ ತಾತ್ವಿಕ ಪರಿಕಲ್ಪನೆಗಳೊಂದಿಗೆ ಸ್ಪಷ್ಟವಾಗಿ ನಿರೂಪಿಸಲಾದ ಕೃತಿಯಾಗಿದೆ. ಉಪಮಾ, ರೂಪಕ, ಉತ್ಪ್ರೇಕ್ಷಾ,ಶ್ಲೇಷ, ಅತಿಶಯೋಕ್ತಿ ಇತ್ಯಾದಿಗಳ ತಾತ್ವಿಕ ವೈಶಿಷ್ಟ್ಯಗಳನ್ನು. ವ್ಯಾಪ್ತಿ ಮತ್ತು ಮಿತಿಗಳನ್ನು ವಿವೇಚಿಸುವ ರೀತಿ ಗಮನಾರ್ಹವಾಗಿದೆ. ಉಲ್ಲಿಖಿತ ಉದಾಹರಣೆಗಳು ತುಂಬಾ ಯೋಗ್ಯವಾಗಿದೆ. ಅಲಂಕಾರವು ಕಾವ್ಯದಲ್ಲಿ ಸ್ವತಂತ್ರವಾಗಿ ಬಿಲ್ಲು ಬಾಣದಂತಿರದೇ ಅದು ರಸ, ಧ್ವನಿ, ವಕ್ರೋಕ್ತಿ ಮೊದಲಾದ ಅಂಶಗಳೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ ಎಂಬ ತತ್ವವನ್ನು ಲೇಖಕಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ. “ಅಲಂಕರೋತಿ ರಸಂ” ಎಂಬ ನುಡಿಗಟ್ಟನ್ನು ಕೇವಲ ಔಪಚಾರಿಕವಾಗಿ ಉಲ್ಲೇಖಿಸುವ ಬದಲು ಅದರ ಅಂತರಾಳದ ತಾತ್ವಿಕತೆಯನ್ನು ಗಂಭೀರವಾಗಿ ನಿರೂಪಿಸುತ್ತಾರೆ ಎಂಬುದಾಗಿ ಮುನ್ನುಡಿ ಬರೆದ ಡಾ. ವಿ ಗಿರೀಶ್ ಚಂದ್ರರ ಮಾತು ಇಲ್ಲಿ ನಿಜವಾಗಿದೆ.
ಈ ಕೃತಿಯಲ್ಲಿ ಅಲಂಕಾರಗಳು ಕೇವಲ ಶಬ್ದ ಶೋಭೆಯ ಸಾಧನಗಳಾಗಿ ಅಲ್ಲ, ಅದು ಸಾಹಿತ್ಯದ ಅಂತರಂಗವನ್ನು ಹೇಗೆ ಶ್ರೀಮಂತಗೊಳಿಸುತ್ತವೆ ಎಂಬುದನ್ನು ವಿವರಿಸುತ್ತದೆ. ದಂಡಿ,ಕುಂತಕ, ಮಮ್ಮಟ ಮೊದಲಾದ ಆಚಾರ್ಯರ ವಿಷಯಗಳನ್ನು ಹೋಲಿಸಿ ಇದರಲ್ಲಿ ವಿವರಿಸಲಾಗಿದೆ. ಇದು ಅಲಂಕಾರ ಶಾಸ್ತ್ರದ ಉಗಮದಿಂದ ಹಿಡಿದು ಇತ್ತೀಚಿನವರೆಗೆ ಸಮಗ್ರ ದೃಷ್ಟಿ ಕೋನವನ್ನು ನೀಡುತ್ತದೆ. ಸಾಹಿತ್ಯ ವಿಮರ್ಶೆಯ ಆಸಕ್ತರಿಗೂ, ಸಂಶೋಧಕರಿಗೂ ಬಹು ಉಪಯುಕ್ತವಾದ ಕೃತಿ ಇದಾಗಿದೆ. ಭಾಷೆಯೂ ಕೂಡ ಸೊಗಸಾಗಿ ಮೂಡಿಬಂದಿದೆ.
ದೀಪಶ್ರೀಯ ಮಾರ್ಗದರ್ಶಕರಾದ ಡಾ. ಸುಮಿತ್ರಾ ವಿ. ಭಟ್ ರವರ ಮೊದಲ ಮಾತಿನಲ್ಲಿ ಹೇಳಿದಂತೆ ಈ ಹೊತ್ತಿಗೆಯು ಸಾಹಿತ್ಯದ ಸಹೃದಯ ಓದುಗರಿಗೆ ಗಣನೀಯವಾಗಿ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ. ವೈವಿಧ್ಯಮಯ ಶಬ್ದ ಅಲಂಕಾರ ಹಾಗೂ ಅರ್ಥ ಅಲಂಕಾರಗಳನ್ನು ವ್ಯವಸ್ಥಿತವಾಗಿ ಒಳಗೊಂಡಿರುವುದರಿಂದ ಕೇವಲ ಸಂಸ್ಕೃತ ಭಾಷೆಯಲ್ಲದೇ, ಹಿಂದಿ ಹಾಗೂ ಕನ್ನಡ ಭಾಷೆ ಓದುವರಿಗೂ ಈ ಪುಸ್ತಕ ಪ್ರಯೋಜನಕಾರಿ ಆಗುವುದು ಖಚಿತವೇ ಸರಿ.
ಅಲಂಕಾರೋ ಹಿ ಸಾಹಿತ್ಯೇ ರಸಬುದ್ಧಿಸುಖಾವಹಃ।
ಶೋಭಯತ್ಯೇಷ ವಾಗ್ವೃಕ್ಷಂ ಪುಷ್ಪಭಾರ ಇವೋದ್ಧತಃ॥
ಅಂದರೆ ಅಲಂಕಾರವು ಸಾಹಿತ್ಯದಲ್ಲಿ ಸದಾ ಅನುಭವ ನೀಡಿ ವಾಗ್ವೃಕ್ಷ ( ಭಾಷೆಯ ಮರವನ್ನು) ಪುಷ್ಪಭಾರದಿಂದ ಶೋಭಿಸುವಂತೆ ಸುಂದರಗೊಳಿಸಿದ ಕೃತಿ ಇದಾಗಿದೆ. ಗುರುಗಳ ಶುಭಾಶಂಸನವಿರುವ ಈ ಕೃತಿ, ಸಿದ್ದಾರ್ಥ ಪ್ರಕಾಶನದ ಆದಿತ್ಯಪ್ರಸಾದ್ ಅವರಿಂದ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ರೀತಿಯ ಇನ್ನಷ್ಟು ಅಧ್ಯಯನಗಳು ನಿರಂತರವಾಗಿ ಆಗಿ ಉತ್ತರೋತ್ತರ ಯಶಸ್ಸು ಲಭಿಸಲಿ. ಶಾರದೆಯ ಸೇವೆಗೈದ ಡಾ.ದೀಪಶ್ರೀಗೆ ಒಳಿತಾಗಲಿ. 200ರೂ ಮುಖಬೆಲೆಯ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಿ ಜ್ಞಾನ ವೃದ್ಧಿಸಿಕೊಳ್ಳಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post