ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಮಹಾನ್ ಸಂತ ಶ್ರೇಷ್ಟ ತತ್ವಜ್ಞಾನಿ ಹಾಗೂ ಜಗತ್ತಿನ ಮೊಟ್ಟ ಮೊದಲ ಸಂಸತ್ತಿನ ಅಧ್ಯಕ್ಷರಾದ ಅಲ್ಲಮ ಪ್ರಭು ದೇವರ ಹೆಸರನ್ನು ಇಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರಾಷ್ಟ್ರೀಯ ಬಸವದಳ ಟ್ರಸ್ಟ್ ಶಿವಮೊಗ್ಗ ವತಿಯಿಂದ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳಿಗೆ ಪ್ರಪ್ರಥಮವಾಗಿ ಮುನ್ನುಡಿ ಬರೆದ ಹೆಗ್ಗಳಿಕೆ ನಮ್ಮ ದೇಶದ್ದಾಗಿದೆ. 12ನೆ ಶತಮಾನದಲ್ಲಿ ಗುರುಬಸವಣ್ಣನವರು ಸಂಸ್ಥಾಪಿಸಿದ ಅನುಭವ ಮಂಟಪವು ಜಗತ್ತಿನ ಮೊಟ್ಟಮೊದಲ ಸಂಸತ್ ಎಂದೆನಿಸಿಕೊಂಡಿದೆ. ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಸಿದ್ಧಾಂತವನ್ನು ಜಗತ್ತಿಗೆ ಪಸರಿಸಿದ ಹಿರಿಮೆ ಮಹಾನ್ ಅನುಭಾವಿ ಅಲ್ಲಮಪ್ರಭು ದೇವರದ್ದು, ಅವರು ನಮ್ಮ ದೇಶದ ಅಸ್ಮಿತೆ ಎನ್ನಬಹುದು. ಅವರ ಹೆಸರಿನಲ್ಲಿ ರಾಜ್ಯ ಹಾಗೂ ದೇಶದ ಯಾವುದೇ ಸ್ಥಳಗಳಿಗೆ ಹೆಸರು ಇಟ್ಟಿರುವ ಉದಾಹರಣೆಗಳಿಲ್ಲ. ಇದು ವಿಷಾದದ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ಸದಸ್ಯರು ಪಾಲ್ಗೊಂಡಿದ್ದರು.
ಕೆಳದಿ ಚನ್ನಮ್ಮ ಹೆಸರಿಡುವಂತೆ ಎಎಪಿ ಆಗ್ರಹ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ Shivamogga Airport ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪನವರ ಹೆಸರು ಇಡುವಲ್ಲಿ ಇಡೀ ಬಿಜೆಪಿಯೇ ನಿರ್ಲಕ್ಷ್ಯ ತೋರಿದೆ. ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ದಿವಾಕರ್ ಆರೋಪಿಸಿದ್ದಾರೆ.
ಅವರು ಇಂದು ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲು ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣರಾಗಿದ್ದಾರೆ. ಅವರ ಸತತ ಪರಿಶ್ರಮದಿಂದ ವಿಮಾನ ನಿಲ್ದಾಣ ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತವಾಗಿತ್ತು. ಆದರೆ ರಾಜ್ಯ ಬಿಜೆಪಿ ಮುಖಂಡರು ಯಡಿಯೂರಪ್ಪ ಅವರ ಹೆಸರನ್ನು ಕೆಂದ್ರಕ್ಕೆ ಶಿಫಾರಸು ಮಾಡಿಯೇ ಇಲ್ಲ. ಹೋಗಲಿ, ಸಂಪುಟದಲ್ಲೂ ಚರ್ಚಿಸಿಯೂ ಇಲ್ಲ. ಸುಮ್ಮನೆ ಬಾಯಿಮಾತಿಗೆ ಹೇಳಿದ್ದಾರೆಯೇ ಹೊರತು ಆ ಬಗ್ಗೆ ಯಾವ ನಿರ್ಧಾರವನ್ನೂ ರಾಜ್ಯ ಬಿಜೆಪಿ ತೆಗೆದುಕೊಳ್ಳಗದೆ ಯಡಿಯೂರಪ್ಪನವರಿಗೆ ಅವಮಾನ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್, ನಜೀರ್, ಶಿವಕುಮಾರ್, ಸತೀಶ್ ಗೌಡ, ಲಕ್ಷ್ಮೀಶ, ಹರೀಶ್, ಸುರೇಶ್‌ಕುಮಾರ್ ಇದ್ದರು.
ಯಾವುದೇ ವಿವಾದವನ್ನು ಸೃಷ್ಟಿ ಮಾಡದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶ್ವಮಾನವ ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಈ ಮೊದಲು ಬಿಜೆಪಿಯ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡುವುದಾಗಿ ತಿಳಿದುಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿ ಕುವೆಂಪು ಅವರ ಹೆಸರನ್ನು ಇಡಲು ಹೇಳಿರುವುದನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ. ಹಾಗಾಗಿ ಒಮ್ಮೆ ಕುವೆಂಪು ಅವರ ಹೆಸರನ್ನು ಇಡಲು ನಿರ್ಧಾರ ಮಾಡಿದ ಮೇಲೆ ಬೇರೆ ಬೇರೆ ಸಂಘಟನೆಗಳು, ಸಮಾಜಗಳು ಬೇರೆ ಹೆಸರನ್ನು ಸೂಚಿಸುವುದು, ವಿವಾದಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಅರಸರ ಅಥವಾ ಜಿಲ್ಲೆಯ ಶರಣರ ಹೆಸರನ್ನು ಇಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮನಿ ಸಜ್ಜನ್, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕಿತ್ತು. ಆದರೆ, ಅವರು ಅದಕ್ಕೆ ಒಪ್ಪಿಲ್ಲ. ಆದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ವರ್ಷಗಳ ಕಾಲ ರಾಜ್ಯಭಾರ ಮಾಡಿದ ಕೆಳದಿ ಅರಸರ ಹೆಸರಿಡಬೇಕು. ಅದರಲ್ಲಿ ಮುಖ್ಯವಾಗಿ ಕೆಳದಿ ಶಿವಪ್ಪನಾಯಕ ಶಿಸ್ತಿಗೆ ಹೆಸರಾದವರು. ಹಲವು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಗೋವಾ ಮತ್ತು ಕೇರಳದವರೆಗೂ ಅವರ ರಾಜ್ಯ ವಿಸ್ತಾರವಾಗಿತ್ತು. ಕಂದಾಯ ವ್ಯವಸ್ಥೆಯನ್ನು ಒಂದು ಶಿಸ್ತಿಗೆ ಒಳಪಡಿಸಿದ ಕೀರ್ತಿ ಅವರದ್ದು. ಆದ್ದರಿಂದ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದರು.

ಕೆಳದಿ ಅರಸರ ಹೆಸರನ್ನು ಬಿಟ್ಟರೆ ಇನ್ನುಳಿದಂತೆ ಶಿವಮೊಗ್ಗ ಶರಣರ ನಾಡಾಗಿದೆ. ಅಕ್ಕಮಹಾದೇವಿ, ಅಲ್ಲಮಪ್ರಭು ಶರಣರ ಪಟ್ಟಿಯಲ್ಲಿ ಆದ್ಯತೆಯ ಸ್ಥಾನ ಪಡೆದಿದ್ದಾರೆ. ಹಾಗಾಗಿ ಅಲ್ಲಮಪ್ರಭು ಅಥವಾ ಅಕ್ಕಮಹಾದೇವಿ ಅವರ ಹೆಸರನ್ನಾದರೂ ಇಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post