ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮಲ್ನಾಡ್ ಕೌಂಟಿ, ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ, ಸಾನ್ವಿ ಬಡಾವಣೆಗಳಲ್ಲಿನ ಸಂಪೂರ್ಣ ಹದಗೆಟ್ಟ ರಸ್ತೆ ಸಂಪರ್ಕ ಮತ್ತು ಅಸಮರ್ಪಕ ಯುಜಿಡಿ ವ್ಯವಸ್ಥೆ #InadequateUGDSystem ತಕ್ಷಣ ಸರಿಪಡಿಸುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಇಂದು ಮೇಲ್ಕಾಣಿಸಿದ ಬಡಾವಣೆಗಳಿಗೆ ಭೇಟಿನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಡಾವಣೆಗಳು ಅಸ್ಥಿತ್ವಕ್ಕೆ ಬಂದು ನಾಲ್ಕೈದು ವರ್ಷಗಳು ಕಳೆದರೂ ಇಲ್ಲಿನ ನಿವಾಸಿಗಳು ಯುಜಿಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ರಸ್ತೆಗಳು ಸಂಪೂರ್ಣ ಹೊಂಡ-ತಗ್ಗುಗಳಿಂದ ಆವರಿಸಲ್ಪಟ್ಟಿದೆ. ಕಾಲ್ನಡಿಗೆಯಲ್ಲಿ ಓಡಾಡಲು ದುಸ್ತರವಾಗಿದೆ ಎಂಬುದನ್ನು ಸ್ಥಳೀಯ ನಿವಾಸಿಗಳು ತಮ್ಮ ಗಮನಕ್ಕೆ ತಂದಿದ್ದು ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಸಾನ್ವಿ ಲೇಔಟ್‍ನಲ್ಲಿ ಕೇವಲ ನಿವಾಸಿಗಳಲ್ಲದೆ ಇತ್ತೀಚೆಗೆ ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿನಿ ವಸತಿ ನಿಲಯವೂ ತಲೆ ಎತ್ತಿದೆ. ಅಲ್ಲಿ ಸುಮಾರು 250 ವಿದ್ಯಾರ್ಥಿನೀಯರು ವಾಸಿಸುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಸಕಾರಿ ನೌಕರರ ಬಡಾವಣೆ ಕಡೆಯಿಂದ ಇನ್ನೊಂದೆಡೆ ಬೊಮ್ಮನಕಟ್ಟೆ ಕಡೆಯಿಂದ ಯುಜಿಡಿ ತ್ಯಾಜ್ಯ ಸಾನ್ವಿಲೇಔಟ್‍ನ ತಗ್ಗಿಗೆ ಬಂದು ಸೇರುತ್ತಿದೆ. ಈ ಯುಜಿಡಿ ಮಾರ್ಗ ಸಾನ್ವಿ ಲೇಔಟ್‍ನಲ್ಲಿಯೇ ಸ್ಥಗಿತಗೊಂಡಿದ್ದು, ಮುಂದೆ ಹೋಗದೆ ಚರಂಡಿ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತಿದೆ. ಅಧಿಕಾರಿಗಳು ಕಳೆದು ನಾಲ್ಕು ವರ್ಷಗಳಿಂದ ಇದನ್ನು ಗಮನಿಸುತ್ತಿದ್ದರೂ ದುರಸ್ತಿಗೆ ಮುಂದಾಗದೆ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.
ಬೊಮ್ಮನಕಟ್ಟೆಯ ಆಟೋ ಸ್ಟ್ಯಾಂಡ್‍ನ ಸಮೀಪವಿರುವ ಕಪ್ಪೆಕಟ್ಟೆ ಕೆರೆಗೆ ಬೊಮ್ಮನಕಟ್ಟೆಯ ಯುಜಿಡಿ ನೀರು ನೇರವಾಗಿ ಸೇರಿ ಕೆರೆಯ ನೀರು ಸಂಪೂರ್ಣ ಕಲ್ಮಷಗೊಂಡಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಕುರಿತು ಸ್ಥಳದಲ್ಲಿದ್ದ ಸಿವಿಲ್ ಇಂಜಿನಿಯರ್ ಲಕ್ಷ್ಮೀ ಅವರಿಗೆ ಕೆರೆಯ ಅಭಿವೃದ್ಧಿ ಬಗ್ಗೆ ನೀಲನಕ್ಷೆ ಸಿದ್ಧಪಡಿಸುವಂತೆ ಸೂಚಿಸಿದರು. ಸ್ಥಳದಲ್ಲಿದ್ದ ಪಾಲಿಕೆಯ ಸ್ಯಾನಿಟರಿ ಅಧಿಕಾರಿ ಪ್ರಭುರಾಜ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಯುಜಿಡಿ ಬ್ಲಾಕ್ ಆಗಿದ್ದು ನಿಮಗೆ ಸಂಬಂಧಿಸಿದ್ದಲ್ಲವೇ ? ಎಂದು ಕಿಡಿಕಾರಿದರು. ಅದೇ ರೀತಿ ಶಾಸಕರು ಸ್ಥಳಕ್ಕೆ ಆಗಮಿಸಿದರೂ ಅಲ್ಲಿಗೆ ಬಾರದ ಯುಜಿಡಿ ಅಧಿಕಾರಿ ಹಾಲೇಶಪ್ಪ ಅವರನ್ನು ಶಾಸಕರು ದೂರವಾಣಿಯಲ್ಲಿಯೇ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ತಕ್ಷಣದಲ್ಲಿ ಬೊಮ್ಮನಕಟ್ಟೆಯಿಂದ ನವುಲೆಯ ಸರ್ಕಾರಿ ಮ್ಯಾಟ್ರಿಕ್ ನಂತರದ ಬಾಲಕರ ವಸತಿನಿಲಯದ ವರೆಗಿನ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಬೇಕು. ಸಾನ್ವಿ ಲೇಔಟ್‍ನಲ್ಲಿರುವ ದೊಡ್ಡ ನೀರಿನ ಟ್ಯಾಂಕ್‍ನಿಂದ ಅಲ್ಲಿಯೇ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ನೌಕರರ ಬಡಾವಣೆಗೆ ನೆಟ್‍ವರ್ಕ್ ಕಲ್ಪಿಸಿ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು. ಹಾಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಯನ್ನು ದುರಸ್ಥಿಗೊಳಿಸಬೇಕು. ಸಾನ್ವಿ ಲೇಔಟ್‍ನಲ್ಲಿ ಒಂದು ಪಾರ್ಕನ್ನು ಅಭಿವೃದ್ಧಿಪಡಿಸಬೇಕು ಎಂಬಿತ್ಯಾದಿ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾಗಿ ಶಾಸಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಸಂಘಗಳ ಪ್ರಮುಖರಾದ ಡಾ.ಬಾಲಕೃಷ್ಣ ಹೆಗಡೆ, ಧರಣೇಂದ್ರ ದಿನಕರ್, ದಿನೇಶ್, ಜಯಪ್ಪ, ಬಾಲಾಜಿ ದೇಶಪಾಂಡೆ, ಶ್ರೀನಾಗ್, ಅನಂತು, ದಿಲೀಪ್, ರಾಘವೇಂದ್ರ, ರಾಜಣ್ಣ, ಮಂಜು, ಶ್ರೀಧರ, ನಾಗರಾಜು, ಮಹೇಶ್, ಜಗದೀಶ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















