ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಪರ್ಧಾತ್ಮಕ ಕಾಲಮಾನದಲ್ಲಿ ಉದಯೋನ್ಮುಖ ಕ್ಷೇತ್ರಗಳ ವಾಸ್ತವತೆಯ ಬೇಡಿಕೆಗಳನ್ನು ಅರಿತು ಅದಕ್ಕೆ ಹೊಂದಿಕೆಯಾಗುವಂತಹ ಅಧ್ಯಾಪನ ಕೌಶಲ್ಯತೆಗಳನ್ನು ರೂಢಿಸಿಕೊಳ್ಳಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ #VTU ಕುಲಪತಿ ಡಾ.ಎಸ್.ವಿದ್ಯಾಶಂಕರ್ ಕರೆ ನೀಡಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ವಿಟಿಯು ಕಾಲೇಜುಗಳ ಅನ್ವಯಿಕ ವಿಜ್ಞಾನ ಅಧ್ಯಾಪಕರಿಗಾಗಿ ಏರ್ಪಡಿಸಿದ್ದ ‘ಅನ್ವಯಿಕ ವಿಜ್ಞಾನಗಳ ಪರಿಷ್ಕೃತ ಪಠ್ಯಕ್ರಮ’ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಇಂಜಿನಿಯರ್ ಗಳನ್ನು #Engineering ರೂಪಿಸುವಲ್ಲಿ ಅನ್ವಯಿಕ ವಿಜ್ಞಾನ ಅತ್ಯವಶ್ಯಕ. ಅಂತಹ ಅನ್ವಯಿಕ ವಿಜ್ಞಾನದ ವಿಕಾಸದಿಂದ ಇಂದಿನ ನಾವೀನ್ಯತೆಯ ಬೆಳವಣಿಗೆಗಳ ಕುರಿತಾಗಿ, ನವೀನ ಬೋಧನಾ ಕೌಶಲ್ಯತೆಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸಿ. ಜ್ಞಾನ ಹಂಚುವ ಹೊಣೆಗಾರಿಯೊಂದಿಗೆ, ವಿದ್ಯಾಸಂಸ್ಥೆಗಳನ್ನು ಉನ್ನತಿಕರಣಕ್ಕೆ ಶ್ರಮಿಸುವ ಜೊತೆಗೆ ವೃತ್ತಿಪರ ಬೆಳವಣಿಗೆಯಲ್ಲಿ ಸಮರ್ಪಣಾ ಮನೋಭಾವದಿಂದ ಪಾಲ್ಗೊಳ್ಳಿ.
ಕ್ವಾಂಟಮ್ ಫಿಸಿಕ್ಸ್, ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ಅನ್ವಯಿಕ ವಿಜ್ಞಾನ ವಿಷಯಗಳು, ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಮರ್ಥ ಇಂಜಿನಿಯರಿಂಗ್ ಪದವೀಧರರನ್ನು ತಯಾರಿಸಲು ಶಕ್ತವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಸ್ವದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ವಾತಾವರಣ ಸೃಷ್ಟಿಸಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಟಿಯು ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಎಚ್.ಎನ್.ರೆಡ್ಡಪ್ಪ ಮಾತನಾಡಿ, ಬದಲಾಗುತ್ತಿರುವ ತಂತ್ರಜ್ಞಾನ, ಉದ್ಯಮ ಮತ್ತು ಸಂಶೋಧನೆಗೆ ಹೊಂದಿಕೊಳ್ಳಲು ಪಠ್ಯಕ್ರಮವನ್ನು ನಿಯಮಿತವಾಗಿ ಪರಿಷ್ಕರಿಸುವುದು ಅತ್ಯಂತ ಅಗತ್ಯವೆಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎಲ್ಲಾ ಇಂಜಿನಿಯರಿಂಗ್ ವಿಷಯಗಳಿಗೆ ಆಧಾರವಾಗಿರುವ ಮೂಲ ವಿಜ್ಞಾನದ ವಿಷಯಗಳನ್ನು ಬಳಸಿಕೊಂಡು, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರಾತ್ಮಕ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬೇಕು. ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು, ಮೂಲ ವಿಜ್ಞಾನದೊಂದಿಗೆ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ನಾವೀನ್ಯ ವಿಚಾರಗಳನ್ನು ಸಂಪರ್ಕಿಸಿ ಹೊಸತನದ ಅನ್ವೇಷಣೆಗಳಿಗೆ ಪ್ರೇರಣೆ ನೀಡುವಂತೆ ಯುವ ಸಮೂಹವನ್ನು ಸಿದ್ದಗೊಳಿಸಬೇಕು ಎಂದು ಅಧ್ಯಾಪಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿಟಿಯು ಮೂಲ ವಿಜ್ಞಾನಗಳ ಪಠ್ಯಕ್ರಮ ಮಂಡಳಿಯ ಅಧ್ಯಕ್ಷರಾದ ಡಾ.ಎಂ.ಎಚ್. ಮೊಯಿನುದ್ದೀನ್ ಖಾನ್ ಉಪಸ್ಥಿತರಿದ್ದರು. ಇದೇ ವೇಳೆ ಪಠ್ಯಕ್ರಮದಲ್ಲಿ ಅಳವಡಿಸಲಾದ ನಾವೀನ್ಯ ವಿಚಾರಗಳು, ಅಂತರಶಿಸ್ತೀಯ ವಿಧಾನಗಳು ಮತ್ತು ಅನ್ವಯಿಕ ವಿಜ್ಞಾನಗಳ ಪ್ರಾಯೋಗಿಕ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post