ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ನಟ ಪ್ರಕಾಶ್ ರಾಜ್ ವಿರುದ್ಧ ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರದ ಕುರಿತಾಗಿ ಉಂಟಾದ ವಿವಾದದಲ್ಲಿ ಸತ್ಯಾಸತ್ಯತೆ ಹೊರಬರಬೇಕು. ಸಂಬಂಧಿತ ಎಲ್ಲ ವ್ಯಕ್ತಿಗಳ ಪಾತ್ರವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸುವುದು ಅಗತ್ಯವೆಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಕೆಲ ವ್ಯಕ್ತಿಗಳೊಂದಿಗೆ ನಟ ಪ್ರಕಾಶ್ ರಾಜ್ ಅವರ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಕುರಿತು ಪ್ರಶ್ನೆಗಳನ್ನು ಎತ್ತಿರುವ ಶಾಸಕ ಚನ್ನಬಸಪ್ಪ, ಈ ಎಲ್ಲಾ ಅಂಶಗಳನ್ನು ತನಿಖೆಯಡಿ ತರಬೇಕೆಂದು ಒತ್ತಾಯಿಸಿದ್ದಾರೆ.
Also read: ಮೂರ್ತಿರಾಯರು ಲಲಿತ ಪ್ರಬಂಧ ಸೊಗಡನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಾಹಿತಿ: ಸುರೇಶ್ ಋಗ್ವೇದಿ
ಇದೇ ವೇಳೆ, ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿರುವ ಸಂಬಂಧಿತ ಸಂಸ್ಥೆಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯವಿದ್ದಲ್ಲಿ ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















