ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕನ್ನಡ ನಿಘಂಟು ತಜ್ಞ ಪ್ರೂ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್ ದತ್ತಾತ್ರಿ ತೀವ್ರ ಸಂತಾಪ ಸೂಚಿಸಿದ್ದಾರೆ.
1913ರ, ಆಗಸ್ಟ್ 23ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್‌ನಲ್ಲಿ ಜನಿಸಿದ ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಎಲ್ಲಕ್ಕಿಂತ ಹೆಚ್ಚು ಕೊಡುಗೆ ಇರುವುದು ನಿಘಂಟು ಕ್ಷೇತ್ರಕ್ಕೆ. ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿ ಗೌರವಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನ ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನಯೋಗ್ಯವೆನಿಸಿದೆ. ಇವರ ಇಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ಸೇವೆಸಲ್ಲಿಸಿ ಶತಾಯುಷಿಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದ ಇವರ ಸಾವು ದುಃಖದ ಸಂಗತಿ ಆಗಿದೆ ಎಂದಿದ್ದಾರೆ.
ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಸ್. ದತ್ತಾತ್ರಿ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post