ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಹೃದಯಾಘಾತದಿಂದ ನಿರ್ದೇಶಕ ನಿಧನರಾಗಿದ್ದಾರೆ.
ಪಾತ್ರದಾರಿ #Pathradaari ಎಂಬ ಕನ್ನಡ ಚಲನಚಿತ್ರದ ನಿರ್ದೇಶಕ ಸಂಗೀತ್ ಸಾಗರ್ #Director Sangeeth Sagar ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕಳೆದ ಎರಡು ತಿಂಗಳಿಂದ ಸಂಗೀತ್ ಸಾಗರ್ ಅವರ ತಂಡವು ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ವಿವಿಧ ಸ್ಥಳಗಳಲ್ಲಿ ಪಾತ್ರದಾರಿ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿತ್ತು. ಬುಧವಾರ ಮಧ್ಯಾಹ್ನದ ಸಮಯದಲ್ಲಿ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್ ಹೇಳಿದ ಕೂಡಲೇ, ಸಂಗೀತ್ ಸಾಗರ್ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡದ ಸದಸ್ಯರು ಅವರನ್ನು ಕೊಪ್ಪ ತಾಲೂಕಿನ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿರ್ದೇಶಕರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಂದು (ಗುರುವಾರ) ಬೆಳಗ್ಗೆ ಸಿನಿಮಾದ ಕೊನೆಯ ಶಾಟ್ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರಾದ ಸಂಗೀತ್ ಸಾಗರ್ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















