ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ 5ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಹಾರ ಭದ್ರತೆ ಯೋಜನೆಯಡಿ ಕೇಂದ್ರ ಸರ್ಕಾರದ 5 ಕೆಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಆದರೆ, ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ 15ನೇ ತಾರೀಖಿನಿಂದ ಎತ್ತುವಳಿ ನೀಡಲಾಗುತ್ತಿದೆ ಎಂದು ದೂರಿದರು.
ಇದರಿಂದಾಗಿ ಪಡಿತರ ಚೀಟಿದಾರರಿಗೆ ಪ್ರತಿ ಮಾಹೆ 20ನೇ ತಾರೀಖಿನ ನಂತರ ಪಡಿತರ ವಿತರಣೆ ಮಾಡಲಾಗುತ್ತಿದೆ. ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಹಿಂದಿನ ಪದ್ಧತಿಯಂತೆ 5ನೇ ತಾರೀಖಿನೊಳಗೆ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡಿಸಿದರೆ ಕೂಡಲೇ ಪಡಿತರ ವಿತರಣೆಗೆ ಕ್ರಮ ವಹಿಸಲಾಗುವುದು. ಆದ್ದರಿಂದ ತಕ್ಷಣ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆಯನ್ನು ವಿಳಂಬವಿಲ್ಲದೇ ನೀಡಬೇಕೆಂದು ಆಗ್ರಹಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಕಮಿಷನ್ ಹಣವನ್ನು ಆಯಾ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು. ಮತ್ತು ಸುಮಾರು 7 ವರ್ಷಗಳಿಂದ ಇ–ಕೆವೈಸಿ ಮಾಡಿರುವ ಹಣವನ್ನು ಸಹ ನೀಡಿರುವುದಿಲ್ಲ. ಕೂಡಲೇ ಇ-ಕೆವೈಸಿ ಹಣವನ್ನು ಬಿಡುಗಡೆ ಮಾಡಬೇಕು. ಹಾಗೂ ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ 24 ಗಂಟೆಗಳ ನಂತರ ಬಿಲ್ ಅಪ್‍ಡೇಟ್ ಆಗುತ್ತಿರುತ್ತದೆ. ಆದ್ದರಿಂದ ಕೂಡಲೇ ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮಾರ್ಚ್‍ನಿಂದ ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ 5 ಕೆಜಿ ಕಮಿಷನ್ ಹಣ ಬಿಡುಗಡೆಯಾಗಿದೆ. ಎನ್.ಎಫ್.ಎಸ್.ಐ. ಕಮಿಷನ್ ಹಣವನ್ನು ಏಪ್ರಿಲ್ ತಿಂಗಳು ಮಾತ್ರ ಬಿಡುಗಡೆಯಾಗಿದ್ದು, ಮೇ, ಜೂನ್, ಜುಲೈ ಕಮಿಷನ್ ಹಣ ಬಿಡುಗಡೆಯಾಗದಿರುವುದರಿಂದ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಉದ್ದೇಶಿಸಿದ್ದು, ಇದನ್ನು ಕೈಬಿಡಬೇಕು. 5 ಕೆಜಿ ಅನ್ನಭಾಗ್ಯ ಅಕ್ಕಿ ನೀಡಿದರೆ ಸರ್ಕಾರಕ್ಕೆ 481 ಕೋಟಿ ರೂ. ವೆಚ್ಚವಾಗಲಿದ್ದು, ಅದೇ ಆಹಾರದ ಕಿಟ್ ನೀಡಿದರೆ 173 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ರಾಜ್ಯದಲ್ಲಿ 20500ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿವೆ. ಕೆಲವು ಜಿಲ್ಲೆಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದ್ದು, ಶೀಘ್ರವೇ ಎಲ್ಲಾ ಜಿಲ್ಲೆಗಳಲ್ಲೂ ಸ್ಮಾರ್ಟ್‍ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರದಿಂದ ಬೇರೆ ರಾಜ್ಯಗಳಿಗೆ ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೇಳೆಕಾಳುಗಳನ್ನು ನೀಡಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಆ ಪದಾರ್ಥಗಳು ಬರುತ್ತಿಲ್ಲ. ಆಹಾರ ಸಚಿವರು ನಮ್ಮ ರಾಜ್ಯದವರೇ ಆಗಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಅವರನ್ನು ಒಳಗೊಂಡ ರಾಜ್ಯಮಟ್ಟದ ಸಮಾವೇಶವನ್ನು ಕೂಡ ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದರು.
ಸಂಘದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿದ್ದು, ಈಗಾಗಲೇ ಡಬ್ಬಿಂಗ್ ನಡೆಯುತ್ತಿದೆ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆಯಾಗಲಿದ್ದು, ರಾಜ್ಯದ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ಅಂಗಡಿಯಿಂದ 20 ಪಡಿತರ ಚೀಟಿದಾರರಿಗೆ ಈ ಚಿತ್ರ ನೋಡುವಂತೆ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿ. ತಾಯಣ್ಣ, ಚನ್ನಕೇಶವೇಗೌಡ, ಸಿದ್ಧಲಿಂಗಯ್ಯ, ಜಿ.ಹೆಚ್. ಲೋಕೇಶ್, ಪಿ.ಡಿ. ಮಂಜಪ್ಪ, ಕೆ. ಈಶ್ವರಾಚಾರ್, ಜಿಲ್ಲಾಧ್ಯಕ್ಷ ಕೆ. ಲೋಕೇಶ್, ವಿ. ಮುರುಗೇಶ್, ನಾಗೇಶ್, ರಾಜೇಶ್, ದೇವರಾಜ್, ಮಂಟೇಸ್ವಾಮಿ, ರಾಜೇಂದ್ರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post