ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಅನಿರುದ್ಧ ವಸಿಷ್ಠ ಎಸ್.ಆರ್. |
2022-23ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ #SSLCResult ಇಂದು ಪ್ರಕಟಗೊಂಡಿದ್ದು, ಶಿವಮೊಗ್ಗ #Shivamogga ಜಿಲ್ಲೆ ಶೇ.84.04ರಷ್ಟು ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 29ನೆಯ ಸ್ಥಾನದಲ್ಲಿದೆ.
ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಕುಸಿತಗೊಂಡಿದ್ದು, ಇಳಿಕೆಯ ಹಾದಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ.

ಎಷ್ಟು ಕಡಿಮೆಯಾಗುತ್ತಿದೆ?
ಪ್ರಸಕ್ತ ವರ್ಷ ಶೇ.84.04ರಷ್ಟು ಫಲಿತಾಂಶ ಗಳಿಸುವ ಮೂಲಕ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 29ನೆಯ ಸ್ಥಾನದಲ್ಲಿದೆ. 2022ರಲ್ಲಿ ಶೇ.84.60ರಷ್ಟು ಫಲಿತಾಂಶದ ಮೂಲಕ 26ನೆ ಸ್ಥಾನದಲ್ಲಿತ್ತು. ಅಂದರೆ ಕಳೆದ ಬಾರಿಗಿಂತಲೂ ಶೇ.0.56ರಷ್ಟು ಕಡಿಮೆ ಫಲಿತಾಂಶ ಗಳಿಸಿದ್ದರೆ, 26ರಿಂದ 29ನೆಯ ಸ್ಥಾನಕ್ಕೆ ಕುಸಿದಿದೆ.
2016-17ರಲ್ಲಿ ಶೇ.75.01, 2017-18ರಲ್ಲಿ ಶೇ.78.75 ರಷ್ಟು ಫಲಿತಾಂಶ ದಾಖಲಾಗಿದ್ದು, 2019ರಲ್ಲಿ ವ್ಯಾಪಿಸಿದ್ದ ಕರೋನಾ ಸೋಂಕಿನ ಕಾರಣದಿಂದಾಗಿ ಎಲ್ಲ ವಿದ್ಯಾರ್ಥಿಗಳಲ್ಲಿ ಉತ್ತೀರ್ಣ ಮಾಡಲಾಗಿತ್ತು. ಆ ವರ್ಷ ಶೇ.79.13ರಷ್ಟು ಫಲಿತಾಂಶ ದಾಖಲಾಗಿತ್ತು.

2016ರಿಂದ 2022ರವರೆಗಿನ ಫಲಿತಾಂಶ ಏರಿಕೆಯ ಹಾದಿಯಲ್ಲಿದ್ದರೂ 2022ಕ್ಕೆ ಹೋಲಿಸಿದರೆ 2023ರ ಈ ಬಾರಿ ಮೂರು ಸ್ಥಾನಗಳಲ್ಲಿ ಏಕಾಏಕಿ ಕುಸಿದಿರುವುದು ಯಾಕೆ ಎಂಬ ಪ್ರಶ್ನೆಯನ್ನು ಮೂಡಿಸಿದೆ.
ಗಂಭೀರವಾಗಿ ಚಿಂತಿಸುವ ತುರ್ತು ಅಗತ್ಯವಿದೆ
ಕಳೆದ ವರ್ಷಕ್ಕಿಂತಲೂ ಈ ವರ್ಷ ಏಕಾಏಕಿ 3 ಸ್ಥಾನಗಳು ಕುಸಿದಿರುವುದು ನಿರ್ಲಕ್ಷ ಮಾಡುವ ವಿಚಾರವಲ್ಲ.

ಇನ್ನು, ಈ ಬಾರಿ ಎರಡನೆಯ ಸ್ಥಾನ ಗಳಿಸಿರುವ ಮಂಡ್ಯ ಜಿಲ್ಲೆ, 2017ರಲ್ಲಿ ಶೇ.71.73ರಷ್ಟು ಫಲಿತಾಂಶದೊಂದಿಗೆ 23ನೆಯ ಸ್ಥಾನ, 2018ರಲ್ಲಿ ಶೇ. 71.57ರಷ್ಟು ಫಲಿತಾಂಶದೊಂದಿಗೆ 28ನೆಯ ಸ್ಥಾನ, 2019ರಲ್ಲಿ ಶೇ.85.65ರಷ್ಟು ಫಲಿತಾಂಶದೊಂದಿಗೆ 10ನೆಯ ಸ್ಥಾನ, 2020ರಲ್ಲಿ ಶೇ. 96.61ರಷ್ಟು ಫಲಿತಾಂಶದೊಂದಿಗೆ 11ನೆಯ ಸ್ಥಾನ, 2021ರಲ್ಲಿ ಎ ಗ್ರೇಡ್ ಹಾಗೂ ಈ ಬಾರಿ ಶೇ. 96.74ರಷ್ಟು ಫಲಿತಾಂಶದೊಂದಿಗೆ 2ನೆಯ ಸ್ಥಾನವನ್ನು ಗಳಿಸಿದೆ.
ಹಾಗೆಯೇ, ಈ ಬಾರಿ ರಾಜ್ಯಕ್ಕೇ ಮೂರನೆಯ ಬಾರಿ ಸ್ಥಾನ ಗಳಿಸಿರುವ ಹಾಸನ ಜಿಲ್ಲೆ 2017ರಲ್ಲಿ ಶೇ. 69.58ರಷ್ಟು ಫಲಿತಾಂಶದೊಂದಿಗೆ 31ನೆಯ ಸ್ಥಾನ, 2018ರಲ್ಲಿ ಶೇ. 84.68ರಷ್ಟು ಫಲಿತಾಂಶದೊಂದಿಗೆ 7ನೆಯ ಸ್ಥಾನ, 2019ರಲ್ಲಿ ಶೇ. 89.33ರಷ್ಟು ಫಲಿತಾಂಶದೊಂದಿಗೆ 1ನೆಯ ಸ್ಥಾನ, 2020ರಲ್ಲಿ ಶೇ. 88.61ರಷ್ಟು ಫಲಿತಾಂಶದ ಮೂಲಕ 9ನೆಯ ಸ್ಥಾನ, 2021ರಲ್ಲಿ ಎ ಗ್ರೇಡ್ ಹಾಗೂ ಈ ಬಾರಿ ಶೇ.96.68ರಷ್ಟು ಫಲಿತಾಂಶದೊಂದಿಗೆ 3 ನೆಯ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದೆ.
ಪ್ರಮುಖವಾಗಿ, ಈ ಮೂರು ಜಿಲ್ಲೆ ಹೊರತುಪಡಿಸಿ ಸಾಮಾನ್ಯವಾಗಿ ಬಯಲುಸೀಮೆ, ಉತ್ತರ ಕರ್ನಾಟದ ಜಿಲ್ಲೆಗಳು ಕೊನೆಯ ಸ್ಥಾನಗಳಲ್ಲಿ ಇರುತ್ತಿತ್ತು. ಆದರೆ, ಉತ್ತಮ ಸ್ಥಾನಗಳನ್ನು ಗಳಿಸಿದೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದ ಫಲಿತಾಂಶ ಕಡಿಮೆಯಾಗಲು ಕಾರಣವೇನು? ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಯಿತೇ? ಶಿಕ್ಷಣ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಸಾಮಾಜಿಕ, ರಾಜಕೀಯ ಬೆಳವಣಿಗೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆಯೇ? ಫಲಿತಾಂಶ ಕಡಿಮೆಯಾಗಿರುವುದರಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವೆಷ್ಟು ಎಂಬೆಲ್ಲಾ ವಿಚಾರಗಳ ಕುರಿತಾಗಿ ಗಂಭೀರವಾಗಿ ಚಿಂತನೆ ನಡೆಸಿ, ಮುಂದಿನ ವರ್ಷದಿಂದ ಇದನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರನ್ನೂ ಸಮನ್ವಯಗೊಳಿಸಿ, ಹಿನ್ನಡೆಗೆ ಕಾರಣ ಕಂಡು ಹಿಡಿದು, ಅದನ್ನು ಸರಿಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ಮಾತ್ರವಲ್ಲ ಜಿಲ್ಲೆಗೆ ಈ ವಿಚಾರದಲ್ಲಿ ಅಂಟಿರುವ ಕಳಂಕ ತೊಡೆದು, ಮೊದಲಿನ ಕೀರ್ತಿಯನ್ನು ಎತ್ತಿ ಹಿಡಿಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post