ಶಿವಮೊಗ್ಗ: ಆರ್ಥಿಕ ಸಬಲತೆ ಮನೆಯ ವೃದ್ಧರೊಂದಿಗಿನ ಸಂಬಂಧ ಸಡಿಲ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ವಿಷಾದ ವ್ಯಕ್ತಪಡಿಸಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ವೃದ್ಧಾಪ್ಯ ಮನುಷ್ಯನ ಜೀವನದಲ್ಲಿ ಸಹಜವಾದ ಘಟ್ಟ. ಅನುಭವದ ಮೂಟೆಯನ್ನು ಹೊಂದಿರುವ ಸಂಧ್ಯಾ ಕಾಲದಲ್ಲಿರುವ ಜೀವಗಳನ್ನು ಪ್ರೀತಿ, ವಾತ್ಸಲ್ಯ ತುಂಬಿದ ಆಸ್ಥೆಯಿಂದ ನೋಡಿಕೊಳ್ಳುವುದು ಯುವಕರ ಹಾಗೂ ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಹೊಸ ಚಿಗುರಿಗೆ ಒಂದು ಕಳೆ ಹಾಗೂ ಶಕ್ತಿ ಬರಬೇಕಾದರೆ ಹಳೆಯ ಬೇರು ಅತ್ಯಂತ ಮುಖ್ಯವಾದುದು. ಅದೇ ರೀತಿ ಯುವಕರೆಂಬ ಹೊಸ ಚಿಗುರುಗಳಿಗೆ ಚೈತನ್ಯ ಬರಬೇಕಾದರೆ ಹಿರಿಯರೆಂಬ ಹಳೆಯ ಬೇರುಗಳ ರಕ್ಷಣೆ ಹಾಗೂ ಆರೈಕೆ ಅತ್ಯಗತ್ಯ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಯಾಂತ್ರಿಕ ಜೀವನ ಶೈಲಿ ಮಾನವೀಯ ಮೌಲ್ಯಗಳನ್ನು ಮರೆಯಾಗುವಂತೆ ಮಾಡುತ್ತಿರುವುದು ಅಂತಕಕಾರಿ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು,ಮನುಷ್ಯ ತನ್ನ ಜೀವನದ ಪ್ರತಿ ಕ್ಷಣವನ್ನು ಅದ್ಭುತವಾಗಿ ಕಳೆಯುವುದನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬರೂ ದೈಹಿಕ ಆರೋಗ್ಯದೊಂದಿಗೆ ಮಾನಸಿಕವಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ನಿಯಮಿತ ವ್ಯಾಯಮ, ಔಷಧಿಗಳನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಆಗ ಜೀವನದ ಆಸಕ್ತಿದಾಯಕವಾಗಿರುತ್ತದೆ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಜೀವನಸಂಜೆ ವೃದ್ಧಾಶ್ರಮದ ಅಧ್ಯಕ್ಷರಾದ ಎಂ. ಹಾಲಪ್ಪ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡಾ.ಉದಯಶಂಕರ್, ಡಾ.ನಿರಂಜನ್ ಮೊದಲಾದ ಭಾಗವಹಿಸಿದ್ದರು.
(ವರದಿ: ಯು.ಜೆ. ನಿರಂಜನಮೂರ್ತಿ, ಶಿವಮೊಗ್ಗ)
Discussion about this post