ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭೆಗೆ ಬ್ಯಾಲೆಟ್ ಪೇಪರ್ ವೋಟಿಂಗ್ (ಮತ ಪತ್ರದ ಮೂಲಕ ಮತದಾನ) ಇಂದಿನಿಂದ ಆರಂಭವಾಗಿದ್ದು, ವಿನೋಬನಗರದ ಚಾಚಾನೆಹರು ಪಾರ್ಕ್ ರಸ್ತೆಯಲ್ಲಿರುವ ತಮ್ಮ ಜೈ ಭವಾನಿ ನಿವಾಸದಲ್ಲಿ 93 ವರ್ಷ ವಯಸ್ಸಿನ ನಿವೃತ್ತ ಪ್ರಾಂಶುಪಾಲ ಆರ್. ಪುಟ್ಟು ಸಿಂಗ್ ಅವರು ಮತದಾನ ಮಾಡಿದರು
ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 11 ಚುನಾವಣಾ ಸಿಬ್ಬಂದಿಗಳು ನಿವಾಸಕ್ಕೆ ಆಗಮಿಸಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಿ, ಸೀಲ್ ಮಾಡಿದ್ದ ಮತ ಡಬ್ಬಕ್ಕೆ ಹಾಕಿಸಿದರು.
ಮತದಾನ ಪ್ರಕ್ರಿಯೆಯನ್ನು ವೀಡಿಯೋ ಮೂಲಕ ಚಿತ್ರೀಕರಿಸಲಾಯಿತು. ಮತಪತ್ರಕ್ಕೆ ಪೆನ್ನಿನಿಂದ ಗುರುತು ಮಾಡಿಸಿ, ಮತದಾನ ಮಾಡಿಸಲಾಯಿತು. ಎರಡು ಲಕೋಟೆಗಳಲ್ಲಿ ಚಲಾಯಿಸಿದ ಮತಪತ್ರ ಇಟ್ಟು ಸೀಲ್ ಮಾಡಿ ಡಬ್ಬಿಗೆ ಹಾಕಿಸಲಾಯಿತು. ಈ ಹಿಂದೆ ಮತಗಟ್ಟೆಯಲ್ಲಿ ನಡೆಯುತ್ತಿದ್ದಂತೆಯೇ ಗುಪ್ತ ಮತದಾನ ನಡೆಯಿತು.
Also read: ಕಾಲೇಜಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ: ವಿದ್ಯಾರ್ಥಿಯ ಬರ್ಬರ ಹತ್ಯೆ
ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಮತದಾನ ಕೇಂದ್ರಕ್ಕೆ ಹೋಗದಂತ ಪರಿಸ್ಥಿತಿ ಇದ್ದವರು ಮನೆಯಿಂದ ಮತದಾನ ಆಯ್ಕೆ ಮಾಡಿಕೊಂಡಿದ್ದರು. ಇದೇ ಮೊದಲ ಬಾರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಕಲ್ಪಿಸಿದೆ.
ಕಳೆದ ಬಾರಿ ಮತಗಟ್ಟೆಗೆ ತೆರಳಲು ಬಹಳ ಕಷ್ಟವಾಗಿತ್ತು. ಆದರೆ ಈ ಬಾರಿ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶವಾಗಿರುವುದು ಸಂತೋಷವಾಗಿದೆ. ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ ಮತ್ತು ಮತದಾನ ಮಾಡಲು ವಿಶೇಷವಾಗಿ ನೀಡಿರುವ ಈ ಸೌಲಭ್ಯವನ್ನು ಹಿರಿಯರು ಬಳಸಿಕೊಳ್ಳಬೇಕು ಎಂದು ಮನೆಯಲ್ಲೇ ಮತದಾನ ಮಾಡಿದ ಆರ್. ಪುಟ್ಟುಸಿಂಗ್ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post