ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕತೆಯ ಜಾಡಿನಲ್ಲಿ ಕಾಣಸಿಗುವ ಕಾಲ್ಪನಿಕ ಆಕರ್ಷಣೆಗಳಿಗೆ ಸಿಲುಕಿ ಬಲಿಯಾಗಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ ಸಲಹೆ ನೀಡಿದರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಸತಿ ನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಜಾಲತಾಣದಲ್ಲಿ ಕಾಣುವುದೆಲ್ಲವು ನಿಜವಲ್ಲ. ವಾಸ್ತವತೆಯ ಜ್ಞಾನವನ್ನು ಪಡೆಯಿರಿ. ಜಾಲತಾಣಗಳು ನಮ್ಮನ್ನು ಅಂಧತ್ವದ ಮೊಹದ ಬಲೆಗೆ ಸಿಲುಕಿಸುತ್ತಿದೆ. ಅಂತಹ ಆಕರ್ಷಣೆಗಳಿಂದ ಎಚ್ಚರದಿಂದಿರಿ. ವಾಸ್ತವತೆಯನ್ನು ವಿಮರ್ಶಿಸಲು ಪ್ರಯತ್ನಿಸಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳುವ ಸಂಯಮತೆ ಬೇಕು.
ನಮ್ಮ ಯುವ ಸಮೂಹದಲ್ಲಿ ಅದ್ಭುತವಾದ ಗುರಿಯಿದೆ, ಅದರೇ ಕ್ರಮಿಸುವ ಮಾರ್ಗ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆ ನೀಡಿ. ಪೋಷಕರು ಮತ್ತು ಸಮಾಜದ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದು ಜ್ಞಾಪಕದಲ್ಲಿ ಇಡಿ. ಕಾನೂನು ಎಂಬುವುದು ಒಂದು ಸಾಮಾನ್ಯ ಜ್ಞಾನ. ಅಂತಹ ಜ್ಞಾನ ಸದಾ ನಮ್ಮನ್ನು ಜವಾಬ್ದಾರಿಯಿಂದ ನಡೆಯುವಂತೆ ಮಾಡುತ್ತದೆ. ಹೆಣ್ಣು ಮಕ್ಕಳ ಪ್ರತಿ ಹಂತದ ರಕ್ಷಣೆಯಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಹಿಳಾ ಸಮಾನತೆ ಸಬಲಿಕರಣದ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಎರಡು ಆಯಾಮವಿದೆ. ಸಾಮಾಜಿಕ ಮತ್ತು ಕಾನೂನಿನ ಆಯಾಮದ ಅಡಿಯಲ್ಲಿ ಈ ಚರ್ಚೆಗಳು ನಡೆಯುತ್ತಿದೆ. ಕಾನೂನಿನ ಕುರಿತು ಅರಿವಿದೆ ಅದರೇ ಅದರ ಮೌಲ್ಯವೇನು ಎಂಬುದು ಗೊತ್ತಿಲ್ಲ.
ಹದಿಹರೆಯದ ವಿದ್ಯಾರ್ಥಿನಿಯರು ಅನೇಕ ಗೊಂದಲದಲ್ಲಿದ್ದಾರೆ. ಅಂತಹ ಗೊಂದಲಗಳಿಗೆ ಮೂಲ ಕಾರಣ ಆಧುನಿಕ ಮಾಧ್ಯಮಗಳು, ಜಾಲತಾಣಗಳು. ಸಾಮಾಜಿಕ ಜಾಲತಾಣದಲ್ಲಿ ನೋಡುವ ವಿಚಾರವೆಲ್ಲವು ನಿಜವೆಂಬ ಭ್ರಮೆ ನಮ್ಮಲ್ಲಿದೆ. ನಾವು ಕೂಡ ಆಧುನಿಕವಾಗಿ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂಬ ಆತುರ ಶುರುವಾಗಿದೆ. ಹಕ್ಕುಗಳನ್ನು ಬಳಸುವಾಗ ನಿಮ್ಮ ಮೇಲಿರುವ ಜವಾಬ್ದಾರಿಗಳ ಬಗ್ಗೆಯೂ ಅರಿವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ವಿದ್ಯಾರ್ಥಿ ನಿಲಯದ ಮುಖ್ಯಸ್ಥೆ ಸಂಜಿದಾ ಬಾನು, ದಿವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Discussion about this post